ಸಂಗಾರೆಡ್ಡಿ (ತೆಲಂಗಾಣ): ಹೆಣ್ಣು ಮಗು ಜನಿಸಿದರೆ ಕೆಲ ಪೋಷಕರು ಮತ್ತು ಕುಟುಂಬದವರು ಆತಂಕ ಮತ್ತು ಬೇಸರಕ್ಕೆ ಒಳಗಾಗುತ್ತಾರೆ. ಅವಳು ಇನ್ನೂ ಮಗುವಾಗಿದ್ದಾಗಲೇ ಆಕೆಯ ಖರ್ಚು, ವೆಚ್ಚ ಹಾಗೂ ಮದುವೆಯ ಬಗ್ಗೆ ಚಿಂತಿಸಲು ಶುರು ಮಾಡುತ್ತಾರೆ. ಆದರೆ, ತೆಲಂಗಾಣದಲ್ಲಿ ಕೆಲ ಹಳ್ಳಿಯಲ್ಲಿ ಹೆಣ್ಣು ಮಗು ಹುಟ್ಟಿದೆ ಎಂದು ತಿಳಿದೇ ಇಡೀ ಊರಿನವರು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಮಗುವಿನ ಹೆಸರಲ್ಲಿ ಗ್ರಾಮಸ್ಥರೇ ಹಣ ಠೇವಣಿ ಇಟ್ಟು, ಕುಟುಂಬ ಮತ್ತು ಆ ಹೆಣ್ಣು ಮಗುವಿಗೆ ಆರ್ಥಿಕ ಭದ್ರತೆ ಒದಗಿಸುತ್ತಾರೆ.
ಹರಿದಾಸ್‌ಪುರ ಎಂಬ 'ಆದರ್ಶ ಗ್ರಾಮ': ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಒಂದು ಆದರ್ಶ ಗ್ರಾಮ ಇದೆ. ಇಲ್ಲಿನ ಕೊಂಡಾಪುರ ಮಂಡಲದ ಹರಿದಾಸ್‌ಪುರ ಗ್ರಾಮದ ಯಾವುದೇ ಮನೆಯಲ್ಲಿ ಹೆಣ್ಣು ಮಗು ಜನಿಸಿದರೂ, ಇಡೀ ಊರಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಅಲ್ಲದೇ, ನವಜಾತ ಶಿಶು ಸೇರಿ ಪೋಷಕರೊಂದಿಗೆ ಹೊಸ ಬಟ್ಟೆಗಳನ್ನು ವಿತರಿಸಿ ಗ್ರಾಮಸ್ಥರೆಲ್ಲರೂ ಸಿಹಿ ಹಂಚುತ್ತಾರೆ. ಅಂದು ಹರಿದಾಸ್‌ಪುರ ಬಣ್ಣ- ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ.
ಹರಿದಾಸ್‌ಪುರ ಗ್ರಾಮದಲ್ಲಿ ದಂಪತಿಯೊಬ್ಬರು ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಈ ಕುಟುಂಬ ಸಂಕಷ್ಟದಲ್ಲಿರುವುದನ್ನು ಅರಿತ ಗ್ರಾಮ ಪಂಚಾಯಿತಿಯ ಹಿರಿಯರು 2020ರಲ್ಲಿ ಪ್ರತಿ ಹೆಣ್ಣು ಮಗುವಿನ ಹೆಸರಲ್ಲಿ 5 ಸಾವಿರ ರೂ. ಹಣ ಜಮೆ ಮಾಡಿದರು.
ಅಂದಿನಿಂದ ಯಾವುದೇ ಮನೆಯಲ್ಲೂ ಹೆಣ್ಣು ಮಗು ಹುಟ್ಟಿದರೂ ಹಬ್ಬದಂತೆ ಆಚರಣೆ ಮಾಡಿ, ಆ ಮಗುವಿನ ಹೆಸರಲ್ಲಿ ಹಣ ಠೇವಣಿ ಇಡುತ್ತಾರೆ. ಇದುವರೆಗೆ ಸುಮಾರು ನೂರು ಹೆಣ್ಣು ಮಕ್ಕಳಿಗೆ ಪಂಚಾಯಿತಿಯಿಂದ ಹಣ ಠೇವಣಿ ನೀಡಲಾಗಿದೆ.
ಹೆಣ್ಣು ಮಗು ಹುಟ್ಟಿದರೆ 10 ಸಾವಿರ ನಗದು ಉಡುಗೊರೆ: ವರಂಗಲ್ ಜಿಲ್ಲೆಯಲ್ಲೂ ವಿಶೇಷ ಗ್ರಾಮವೊಂದಿದೆ. ಮಕ್ಕಳು ಜನಿಸಿದಾಗ ಸಂಬಂಧಿಕರು ಮತ್ತು ನಿಕಟ ಸ್ನೇಹಿತರು ವಿವಿಧ ಉಡುಗೊರೆಗಳನ್ನು ಸಾಮಾನ್ಯವಾದರೆ, ಇಲ್ಲಿನ ಗೀಸುಕೊಂಡ ಮಂಡಲದ ಮರಿಯಾಪುರಂ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ 10 ಸಾವಿರ ರೂ. ನಗದು ಉಡುಗೊರೆ ಕೊಡಲಾಗುತ್ತದೆ. ಮೊದಲ ಉಡುಗೊರೆ ಗ್ರಾಮದ ಸರಪಂಚರು ನೀಡುವುದು ಮತ್ತೊಂದು ವಿಶೇಷ.
ಗ್ರಾಮದ ಸರಪಂಚ ಅಲ್ಲಂ ಬಾಲಿರೆಡ್ಡಿ ಅವರು 2019ರಲ್ಲಿ ಗ್ರಾಮದಲ್ಲಿ ಜನಿಸಿದ ಎಲ್ಲ ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ನೀಡಲೆಂದು ಇಂತಹ ಸಂಪ್ರದಾಯವನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿ ಮಗುವಿಗೂ ಉಡುಗೊರೆ ರೂಪದಲ್ಲಿ ಬಂದ 10 ಸಾವಿರ ರೂ. ಠೇವಣಿ ನೀಡಲಾಗುತ್ತದೆ. ಹದಿನೆಂಟು ತುಂಬಿದ ನಂತರವೇ ಹಣ ಬಳಸಬೇಕೆಂದು ಸ್ವಯಂ ಷರತ್ತನ್ನೂ ಗ್ರಾಮಸ್ಥರೇ ಹಾಕಿಕೊಂಡಿದ್ದಾರೆ.
ಹೆಣ್ಣು ಮಗು ಎಂದರೆ ಅದೃಷ್ಟವಂತಳು: ಹೆಣ್ಣು ಮಗು ಅದೃಷ್ಟ ಎಂದು ನಂಬುವ ಗ್ರಾಮಕ್ಕೂ ತೆಲಂಗಾಣದಲ್ಲಿದೆ. ಅದುವೇ ಕರೀಂನಗರ ಜಿಲ್ಲೆಯ ಕೊಂಡಾಯಪಲ್ಲಿ ಗ್ರಾಮ. ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗಾಗಿಯೇ 2018ರಲ್ಲಿ 'ಮಹಾಲಕ್ಷ್ಮಿ ಫೌಂಡೇಶನ್' ಎಂಬ ದತ್ತಿ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಈ ಸಂಸ್ಥೆ ಮೂಲಕ ಗ್ರಾಮಸ್ಥರೆಲ್ಲರೂ ತಮ್ಮ ಕೈಲಾದಷ್ಟು ಹಣ ನೀಡಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಗ್ರಾಮದ ಜನರು 'ಮಹಾಲಕ್ಷ್ಮಿ ಫೌಂಡೇಶನ್' ಮೂಲಕ ಪ್ರತಿ ಹೆಣ್ಣು ಮಗುವಿಗೆ ಆರ್ಥಿಕ ಸಹಾಯ ನೀಡುತ್ತಾರೆ. ಒಟ್ಟು ಸಾವಿರ ರೂ. ಜಮೆಯಾದ ಬಳಿಕ ಜನಿಸಿದಾಗ ಹೆಣ್ಣು ಮಗು ಹೆಸರಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಜಮೆ ಮಾಡಲಾಗುತ್ತದೆ. ಅಲ್ಲದೇ, ಹೆಣ್ಣು ಮಕ್ಕಳ ಮದುವೆಗೆ ಐವತ್ತು ಸಾವಿರ ರೂ. ನೆರವು ಸಹ ನೀಡಲಾಗುತ್ತದೆ.
ಇದನ್ನೂ ಓದಿ: 1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ