ನವದೆಹಲಿ: ಗುಜರಾತ್ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಕಾರಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆ ಅಧಿಕಾರಿಯನ್ನು ಚುನಾವಣೆಯ ಸಾಮಾನ್ಯ ವೀಕ್ಷಕರ ಸ್ಥಾನದಿಂದ ಚುನಾವಣಾ ಆಯೋಗ ತೆಗೆದುಹಾಕಿದೆ.
2011ರ ಬ್ಯಾಚ್ನ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಗುಜರಾತ್ ಚುನಾವಣೆಯಲ್ಲಿ ಅಹಮದಾಬಾದ್ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿದ್ದರು. ವೀಕ್ಷಕರಾಗಿ ಸೇರಿಕೊಂಡ ತಕ್ಷಣವೇ ಅಭಿಷೇಕ್ ಸಿಂಗ್, ಕೆಂಪು ಬಣ್ಣದಿಂದ 'ವೀಕ್ಷಕ' ಎಂದು ಬರೆಯಲಾಗಿದ್ದ ಸರ್ಕಾರದ ಅಧಿಕೃತ ಕಾರಿನ ಮುಂದೆ ನಿಂತು ಫೊಟೋ ತೆಗೆಸಿಕೊಂಡಿದ್ದರು. ಅಲ್ಲದೇ, ತಮ್ಮೊಂದಿಗೆ ಭದ್ರತಾ ಸಿಬ್ಬಂದಿ ಸೇರಿ ಇತರರು ಇರುವ ಎರಡು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಗಮನಿಸಿದ ಚುನಾವಣಾ ಸಮಿತಿಯು ಶುಕ್ರವಾರ ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ಈ ವಿಷಯದ ಕುರಿತು ಕಠಿಣ ಪದಗಳಿಂದ ಪತ್ರ ಬರೆದು, ತಮ್ಮ ಹುದ್ದೆಯನ್ನು ಪಬ್ಲಿಸಿಟಿಗಾಗಿ ಅಭಿಷೇಕ್ ಸಿಂಗ್ ಬಳಸಿಕೊಂಡಿದ್ದಾರೆ ಎಂದು ತಿಳಿಸಿದೆ. ಇದನ್ನು ಮುಖ್ಯ ಚುನಾವಣಾ ಅಧಿಕಾರಿ ಗಂಭೀರವಾಗಿ ಪರಿಗಣಿಸಿದ್ದಾರೆ.
ಅಂತೆಯೇ, ತಕ್ಷಣದಿಂದಲೇ ಸಾಮಾನ್ಯ ವೀಕ್ಷಕರ ಹುದ್ದೆಯಿಂದ ಅಭಿಷೇಕ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಮುಂದಿನ ಆದೇಶದವರೆಗೆ ಅವರನ್ನು ಚುನಾವಣಾ ಸಂಬಂಧಿತ ಯಾವುದೇ ಕರ್ತವ್ಯಗಳಿಗೆ ನಿಯೋಜಿಸದಂತೆ ನಿರ್ಬಂಧ ಹೇರಿದೆ. ಕೂಡಲೇ ತಮಗೆ ವಹಿಸಿರುವ ಕ್ಷೇತ್ರವನ್ನು ಬಿಟ್ಟು ತೆರಳುವಂತೆ ಸೂಚಿಸಿ, ನೋಡಲ್ ಅಧಿಕಾರಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಅಷ್ಟೇ ಅಲ್ಲ, ಚುನಾವಣಾ ಕರ್ತವ್ಯಕ್ಕೆ ಅವರಿಗೆ ಒದಗಿಸಲಾಗಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ ಚುನಾವಣಾ ಅಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗಬಹುದೇ?