ಜೋಧಪುರ (ರಾಜಸ್ಥಾನ): ಇಂದು ಭಾರತೀಯ ವಾಯುಪಡೆ ದಿನದ ನಿಮಿತ್ತ ಅಭಿನಂದನೆ ಸಲ್ಲಿಸಲು ಹೋಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪೇಚಿಗೆ ಸಿಲುಕಿದ್ದಾರೆ. ಅಭಿನಂದನೆ ಸಲ್ಲಿಸುವ ಪೋಸ್ಟರ್ನಲ್ಲಿ ಭಾರತೀಯ ವಾಯು ಪಡೆಯ ವಿಮಾನದ ಬದಲಿಗೆ ಪಾಕಿಸ್ತಾನದ ವಾಯುಪಡೆಗೆ ಸೇರಿದ ಎಫ್16 ಯುದ್ಧ ವಿಮಾನದ ಫೋಟೋ ಬಳಸಲಾಗಿದೆ. ಇದನ್ನು ಗಮನಿಸಿದ ನೆಟ್ಟಿಗರು ಕೇಂದ್ರ ಸಚಿವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ.
'ಆಕಾಶಕ್ಕೆ ಪ್ರಕಾಶಮಾನವಾದ ಸ್ಪರ್ಶ. ಹೆಮ್ಮೆಯಿಂದ ಆಕಾಶವನ್ನು ಮುಟ್ಟುವ ರಾಷ್ಟ್ರದ ಕಾವಲುಗಾರ ಭಾರತೀಯ ವಾಯುಪಡೆಗೆ 90ನೇ ಸಂಸ್ಥಾಪನಾ ದಿನದ ಶುಭಾಶಯಗಳು' ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ. ಆದರೆ, ಈ ಟ್ವೀಟ್ನಲ್ಲಿ ಬಳಕೆ ಮಾಡಲಾದ ವಿಮಾನದ ಫೊಟೋವು ಪಾಕಿಸ್ತಾನದ ವಾಯುಪಡೆಗೆ ಸೇರಿದ ಎಫ್16 ವಿಮಾನದ್ದು ಎಂದು ನೆಟ್ಟಿಗರು ತಕ್ಷಣಕ್ಕೆ ಗುರುತಿಸಿದ್ದಾರೆ.
ಇತ್ತ, ಸಚಿವರ ಟ್ವಿಟರ್ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದ ತಂಡ ಕೂಡ ಗಮನಿಸಿದ್ದು, ತಕ್ಷಣವೇ ಪಾಕ್ ವಿಮಾನವಿದ್ದ ಪೋಸ್ಟರ್ ತೆಗೆದು ಹಾಕಿದೆ. ನಂತರ ಹೊಸದಾಗಿ ಸಂದೇಶ ಬರೆದು ಭಾರತೀಯ ವಾಯುಪಡೆ ಯುದ್ಧ ವಿಮಾನದ ಫೋಟೋ ಬಳಸಿ ಟ್ವೀಟ್ ಮಾಡಲಾಗಿದೆ. ಆದಾಗ್ಯೂ, ಸಚಿವ ಶೇಖಾವತ್ ಟ್ರೋಲ್ಗೆ ಗುರಿಯಾಗಿದ್ದಾರೆ.
ಕೇಂದ್ರ ಸಚಿವರ ಎಡವಟ್ಟಿಗೆ ಭಾರತ ಮಾತ್ರವಲ್ಲದೇ ಮತ್ತು ಪಾಕಿಸ್ತಾನಿ ಟ್ವಿಟರ್ ಬಳಕೆದಾರರು ಸಹ ತಮ್ಮ ಪ್ರತಿಕ್ರಿಯಿಸಿದ್ದಾರೆ. 'ಹಹ್ಹ. ಸರ್ ಜೀ. ಎಫ್ -16?. ಹೌದು ಭಾರತೀಯ ವಾಯುಪಡೆಯು ಕೇವಲ ಆಕಾಶವನ್ನು ಮುಟ್ಟುತ್ತದೆ. ಅವಮಾನ ಮತ್ತು ಚಹಾಕ್ಕಾಗಿ ನೆರೆಹೊರೆಯವರಲ್ಲಿ ಬೀಳುತ್ತದೆ' ಎಂದು ನೆಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ.
ಮತ್ತೊಬ್ಬರು 'ಆತ್ಮೀಯ ಭಾರತೀಯ ವಾಯುಪಡೆ, ನಾವು ಯಾವಾಗ ಎಫ್ -16 ವಿಮಾನದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ' ಎಂದು ಪ್ರಶ್ನಿಸಿದ್ದಾರೆ. ಅನೇಕರು ಸರ್, ದಯವಿಟ್ಟು ಈ ಟ್ವೀಟ್ ಅನ್ನು ಅಳಿಸಿ ಎಂದು ಕೇಂದ್ರ ಸಚಿವರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದ ನಿರುದ್ಯೋಗಿ ಯುವಕರಿಂದ ಅಹಮದಾಬಾದ್ನಲ್ಲಿ ಪ್ರತಿಭಟನೆ..