ನೋಯ್ಡಾ(ಉತ್ತರ ಪ್ರದೇಶ): ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 50ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ರಾಮ್ ನಾರಾಯಣ್ ಸಿಂಗ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ ಇಲಾಖೆ ಲೆಕ್ಕಕ್ಕೆ ಸಿಗದ ನೂರಾರು ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ.
ಆದಾಯ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆಯಲ್ಲಿ ದೊಡ್ಡ ಮಟ್ಟದ ನಗದು ಪತ್ತೆಯಾಗಿದೆ. 2,000 ಮತ್ತು 500 ಮುಖ ಬೆಲೆಯ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಆದರೆ ಸದ್ಯಕ್ಕೆ ಆದಾಯ ತೆರಿಗೆ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ಹೊರಹಾಕಿಲ್ಲ. ಮಾಹಿತಿ ಪ್ರಕಾರ, ಮಾಜಿ ಐಪಿಎಸ್ ಅಧಿಕಾರಿ ಸಮಾಜವಾದಿ ಪಕ್ಷಕ್ಕೆ ತುಂಬಾ ಹತ್ತಿರವಾದವರು ಎಂದು ಹೇಳಲಾಗಿದೆ. ಕಟ್ಟಡದ ನೆಲಮಾಳಿಗೆಯಲ್ಲಿದ್ದ ಹಲವಾರು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ನೋಯ್ಡಾದ ನಿವೃತ್ತ ಐಪಿಎಸ್ ಅಧಿಕಾರಿ ನಿವಾಸದ ಮೇಲೆ ಐಟಿ ದಾಳಿ
ನೋಯ್ಡಾದ ಸೆಕ್ಟರ್ 50ರಲ್ಲಿರುವ ಅವರ ನಿವಾಸದ ನೆಲಮಾಳಿಗೆಯಲ್ಲಿ ನಿರ್ಮಿಸಲಾದ ಲಾಕರ್‌ನಲ್ಲಿ ಅಪಾರ ಪ್ರಮಾಣದ ಕಪ್ಪು ಹಣ ಇರಿಸಲಾಗಿದೆ ಹಾಗೂ ನೆಲಮಾಳಿಗೆಯಲ್ಲಿ 650 ಲಾಕರ್‌ಗಳಿದ್ದು, ಅಘೋಷಿತ ನಗದು ಇರುವ ಬಗ್ಗೆ ಇಲಾಖೆಗೆ ಮಾಹಿತಿ ಲಭಿಸಿತ್ತು. ಹಾಗಾಗಿ ನಿನ್ನೆ 12 ಗಂಟೆಗೂ ಹೆಚ್ಚು ಕಾಲ ಐಟಿ ಶೋಧ ನಡೆಸಿತ್ತು ಎನ್ನುವ ಮಾಹಿತಿಯಿದೆ. ಐಟಿ ಅಧಿಕಾರಿ ಭಾನುವಾರ ಸಂಜೆ ನೋಯ್ಡಾ ಸೆಕ್ಟರ್ 50ನ್ನು ತಲುಪಿ, ಶೋಧ ಕಾರ್ಯ ಶುರು ಹಚ್ಚಿಕೊಂಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಯ್ಡಾ ಮತ್ತು ಗಾಜಿಯಾಬಾದ್‌ನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಕೂಡಾ ಪರಿಶೀಲನೆ ನಡೆಸಲಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.