ನವದೆಹಲಿ : ಮಧ್ಯಪ್ರದೇಶ ಮೂಲದ ಸೋಯಾ ಉತ್ಪನ್ನಗಳ ತಯಾರಿಕಾ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಸುಮಾರು 450 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಹಚ್ಚಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಈ ಬಗ್ಗೆ ಮಾಹಿತಿ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 18ರಿಂದ 22ರವರೆಗೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಮಧ್ಯಪ್ರದೇಶದ ಬೇತುಲ್, ಸತ್ನಾ, ಮಹಾರಾಷ್ಟ್ರದ ಮುಂಬೈ, ಸೋಲಾಪುರ ಮತ್ತು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿಯೂ ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಲ್ಯಾಪ್ಟಾಪ್, ಹಾರ್ಡ್ ಡ್ರೈವ್ಗಳು, ಪೆನ್ ಡ್ರೈವ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ ಸುಮಾರು ₹450 ಕೋಟಿ ಕಪ್ಪು ಹಣ ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಎಲ್ಜಿ ಡಬ್ಲ್ಯು 41 ಸರಣಿ.. ಇದರ ವೈಶಿಷ್ಟ್ಯಗಳೇನು?
ದಾಖಲೆಯಿಲ್ಲದ 8 ಕೋಟಿ ರೂಪಾಯಿ ನಗದು ಮತ್ತು 44 ಲಕ್ಷ ರೂಪಾಯಿ ಮೌಲ್ಯದ ವಿವಿಧ ದೇಶಗಳ ಕರೆನ್ಸಿ ವಶಕ್ಕೆ ಪಡೆಯಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಮಾಹಿತಿ ನೀಡಿದೆ.
ಇದೇ ಪ್ರಕರಣದಲ್ಲಿ 9 ಬ್ಯಾಂಕ್ಗಳ ಲಾಕರ್ಗಳನ್ನ ಪರಿಶೀಲಿಸಲಾಗಿದೆ. ಉದ್ಯೋಗಿಗಳ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿ ಮಾಡಲಾಗಿದೆ. ಅಕ್ರಮ ವ್ಯವಹಾರಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.