ತಿರುವನಂತಪುರಂ: 'ನಾನು 25 ಕೋಟಿ ರೂ. ಲಾಟರಿ ಗೆಲ್ಲಲೇಬಾರದಿತ್ತು. ಇದೀಗ ಹಣ ಸಹಾಯ ಮಾಡುವಂತೆ ಜನರು ನನ್ನ ಮನೆ ಬಳಿ ಜಮಾಯಿಸುತ್ತಿದ್ದು, ಸ್ವಂತ ಮನೆಗೂ ಹೋಗಲಾಗದೆ ಮನಃಶಾಂತಿ ಕಳೆದುಕೊಂಡಿದ್ದೇನೆ' ಎಂದು ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ತಿರುವನಂತಪುರದ ಆಟೋ ಚಾಲಕ ಅನೂಪ್ ಬಿ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಅನೂಪ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಲಾಟರಿ ಹೊಡೆದಾಗ ನನಗೆ ತುಂಬಾ ಖುಷಿಯಾಗಿತ್ತು. ಆದರೆ ಈಗಿನ ನನ್ನ ಪರಿಸ್ಥಿತಿ ನೋಡಿದರೆ, ಅದನ್ನು ನಾನು ಗೆಲ್ಲಲೇಬಾರದಿತ್ತು ಎಂದು ಅನಿಸುತ್ತಿದೆ. ಲಾಟರಿ ಗೆದ್ದ ಕಾರಣದಿಂದ ನನಗೆ ಹೊರಗಡೆ ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಆರ್ಥಿಕ ಸಹಾಯಕ್ಕಾಗಿ ಮನೆ ಮುಂದೆ ಬರುವ ಜನರಿಂದ ತಪ್ಪಿಸಿಕೊಳ್ಳಲು ನಾನು ನನ್ನ ಸಹೋದರಿಯ ಮನೆ ಅಥವಾ ಇನ್ಯಾರದೋ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಲಾಟರಿ ಗೆದ್ದ ಹಣ ನನಗೆ ಇನ್ನೂ ಬಂದಿಲ್ಲ. ಇದನ್ನು ನಾನು ಜನರಿಗೆ ಹೇಳಿದರೆ ನಂಬುತ್ತಿಲ್ಲ. ನಾನು ಲಾಟರಿ ಗೆದ್ದಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ ಅದರಿಂದ ನಾನು ಇಷ್ಟೊಂದು ತೊಂದರೆ ಅನುಭವಿಸುತ್ತೇನೆ ಎಂದು ಭಾವಿಸಿರಲಿಲ್ಲ. ತೆರಿಗೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಸಿಕ್ಕ ಹಣವನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನಾನು ಬ್ಯಾಂಕ್ನಲ್ಲಿ ಹಾಕುತ್ತೇನೆ ಎಂದಿದ್ದಾರೆ.
ಪ್ರತಿದಿನ ಮನೆಗೆ ಜನರು ಸಹಾಯ ಕೇಳಿಕೊಂಡು ಬರುತ್ತಾರೆ. ನಾನು ನನ್ನ ಮನೆಯನ್ನು ಈಗ ಇರುವಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದುಕೊಂಡಿದ್ದೇನೆ. ಎರಡನೇ ಅಥವಾ ಮೂರನೇ ಬಹುಮಾನ ಗೆದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಮೊದಲ ಬಹುಮಾನದಿಂದಾಗಿ ನನ್ನ ಮನೆಗೆ ನಾನೇ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅನೂಪ್ ಅವರು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಕೇರಳ ಸರ್ಕಾರ ನಡೆಸುವ ಓಣಂ ಬಂಪರ್ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಇದು ಕೇರಳ ಇತಿಹಾಸದಲ್ಲಿಯೇ ಲಾಟರಿ ಟಿಕೆಟ್ನಲ್ಲಿ ನೀಡಿದ ಅತಿದೊಡ್ಡ ಮೊತ್ತವಾಗಿದೆ. ಡ್ರಾ ದಿನಾಂಕ ಮುನ್ನಾ ದಿನ ಅನೂಪ್ ಮಗನ ಪಿಗ್ಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೂ ಸೇರಿಸಿ 500 ರೂ.ನ ಲಾಟರಿ ಟಿಕೆಟ್ ಖರೀದಿಸಿದ್ದರು.
ಇದನ್ನೂ ಓದಿ: ₹25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ ಸೇರುವುದು 15 ಕೋಟಿ ರೂಪಾಯಿ, 10 ಕೋಟಿ ಟ್ಯಾಕ್ಸ್!