ನವದೆಹಲಿ: ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಗುರುವಾರ ನಿಧನ ಹೊಂದಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದ್ದಾರೆ. ಜೆಡಿಯು ನಾಯಕನೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗಿದ್ದ ಒಡನಾಟವನ್ನು ಅವರು ಸ್ಮರಿಸಿದ್ದಾರೆ. ಇದೇ ವೇಳೆ ರಾಜಕೀಯ ಜೀವನದ ಅನೇಕ ಪಟ್ಟುಗಳನ್ನು ಶರದ್ ಯಾದವ್ ಅವರಿಂದ ಕಲಿತಿರುವುದಾಗಿ ತಿಳಿಸಿದ್ದಾರೆ.
'ತುಂಬಲಾರದ ನಷ್ಟ'- ಬಿಹಾರ ಸಿಎಂ ನಿತೀಶ್ ಕುಮಾರ್: ಶರದ್ ಯಾದವ್ ಅವರ ಸಾವು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕಾದ ಅತಿದೊಡ್ಡ ನಷ್ಟ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಶರದ್ ಯಾದವ್ ಅವರ ಜೊತೆ ದೀರ್ಘ ಸಂಬಂಧವನ್ನು ನಾನು ಹೊಂದಿದ್ದೇನೆ. ಅವರ ಸಾವು ಬೇಸರ ಮತ್ತು ಆಘಾತ ಮೂಡಿಸಿದೆ. ಅವರೊಬ್ಬ ದೊಡ್ಡ ಸಮಾಜವಾದಿ ನಾಯಕ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಗಳಿಂದ ಸಂತಾಪ: ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ 70ರ ದಶಕದಲ್ಲಿ ಹೋರಾಡಿದ ವಿದ್ಯಾರ್ಥಿ ನಾಯಕ ಎಂದು ಶರದ್ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೆನಪಿಸಿಕೊಂಡು ಸಂತಾಪ ಸೂಚಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರ ಸಾವು ಬೇಸರ ಮೂಡಿಸಿದೆ. ಸಂಸತ್ತಿನಲ್ಲಿ ರಾಷ್ಟ್ರ ಧ್ವನಿಯಾಗಿದ್ದರು. ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕೂಡ ಅಗಲಿದ ನಾಯಕರಿಗೆ ಸಂತಾಪ ತಿಳಿಸಿದ್ದಾರೆ. ಚಾಣಾಕ್ಷ ಆಡಳಿತಗಾರ, ಸಾರ್ವಜನಿಕ ಜೀವನದ ಅಪರೂಪದ ವ್ಯಕ್ತಿ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಎಂದು ತಿಳಿಸಿದ್ದಾರೆ.
ಶರದ್ ಯಾದವ್ ರಾಜಕೀಯ ಹಾದಿ ಹೀಗಿದೆ..: ಶರದ್ ಯಾದವ್ ಅವರು 1947 ಜುಲೈ 1ರಂದು ಮಧ್ಯಪ್ರದೇಶದ ಬಾಬೈ ಗ್ರಾಮದಲ್ಲಿ ಜನಿಸಿದ್ದರು. ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕ ಮತ್ತು ಜನತಾ ದಳ-ಯುನೈಟೆಡ್ ಅಧ್ಯಕ್ಷ ಸಂಚಾಲಕರಾಗಿದ್ದವರು. 70ರ ದಶಕದ ಬಳಿಕ ಅವರು ರಾಜಕೀಯ ಜೀವನ ಪ್ರವೇಶ ಮಾಡಿದ್ದರು. ಮಧ್ಯಪ್ರದೇಶ ಜಬಲ್ಪುರ್ನಲ್ಲಿ ಲೋಕಸಭಾ ಉಪ ಚುನಾವಣೆ ಗೆಲ್ಲುವ ಮೂಲಕ ಸಂಸತ್ ಪ್ರವೇಶ ಮಾಡಿದ್ದರು. ಕಿಡ್ನಿ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, 7 ಸಲ MP, ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ (75) ಇನ್ನಿಲ್ಲ