ನವದೆಹಲಿ: ಅಧಿಕಾರದಲ್ಲಿರುವುದು ನನ್ನ ಗುರಿಯಲ್ಲ. ಈ ದೇಶಕ್ಕೆ, ದೇಶದ ಜನರಿಗೆ ಸೇವೆ ಸಲ್ಲಿಸುವುದು ನನ್ನ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 83ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನರಿಗೆ 'ಪ್ರಧಾನ ಸೇವಕ'ನಾಗಿರುವುದು ನನ್ನ ಆದ್ಯ ಕರ್ತವ್ಯ ಎಂದರು.
ಯೋಜನೆಗಳ ಮೂಲಕ ಜನರ ಜೀವನ ಬದಲಾಯಿಸಿದ್ದೇವೆ..
ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಯೊಂದಿಗೆ ಮಾತನಾಡುವ ವೇಳೆ, ಸರ್ಕಾರವು ಪ್ರಾರಂಭಿಸಿದ ಯೋಜನೆಗಳ ಮೂಲಕ ನಾವು ಜನರ ಜೀವನವನ್ನು ಬದಲಾಯಿಸಿದ್ದೇವೆ. ಇದು ನನಗೆ ತೃಪ್ತಿಯನ್ನು ನೀಡುತ್ತದೆ. ನಾನು ಇಂದಾಗಲಿ ಅಥವಾ ಭವಿಷ್ಯದಲ್ಲಾಗಲಿ ಅಧಿಕಾರದಲ್ಲಿರಲು ಬಯಸುವುದಿಲ್ಲ, ಜನರ ಸೇವೆಯೇ ನನ್ನ ಗುರಿ ಎಂದು ನಮೋ ಹೇಳಿದರು.
'ಸಬ್ಕಾ ಸಾಥ್, ಸಬ್ಕಾ ವಿಕಾಸ್'
ಉತ್ತರ ಪ್ರದೇಶದ ಜಲೌನ್ನಲ್ಲಿ ನೂನ್ ನದಿ ಎಂಬ ನದಿ ಇದೆ. ಕ್ರಮೇಣ ಈ ನದಿ ಅಳಿವಿನ ಅಂಚಿಗೆ ಬಂದು ನಿಂತಿತ್ತು.ಇದರಿಂದ ಆ ಭಾಗದ ರೈತರಿಗೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಲ್ಲಿನ ಜನರು ಸಮಿತಿ ರಚಿಸಿ, ಕಾರ್ಯಾಚರಣೆ ಕೈಗೊಂಡು ನದಿಗೆ ಜೀವ ತುಂಬಿದ್ದಾರೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್'ಗೆ ಇದೊಂದು ನಿದರ್ಶನ ಎಂದು ಇದೇ ವೇಳೆ ಹೇಳಿದರು.
ಯುವಕರು ಉದ್ಯೋಗ ಸೃಷ್ಟಿಕರ್ತರೂ ಆಗಿದ್ದಾರೆ..
ಭಾರತದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬಗ್ಗೆ ಮಾತನಾಡಿದ ಅವರು, "ಪ್ರಕೃತಿಯನ್ನು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ಯುವಕರು ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲದೆ ಉದ್ಯೋಗ ಸೃಷ್ಟಿಕರ್ತರೂ ಆಗಿದ್ದಾರೆ. ಹೆಚ್ಚು ಯುವ ಜನತೆಯನ್ನು ಹೊಂದಿರುವ ದೇಶಗಳು ಮೂರು ಗುಣಲಕ್ಷಣಗಳನ್ನು ಹೊಂದಿರುತ್ತದೆ - ಕಲ್ಪನೆಗಳು ಮತ್ತು ನಾವೀನ್ಯತೆ, ಸವಾಲುಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಏನನ್ನಾದರೂ ಮಾಡುತ್ತೇವೆಂಬ ಆತ್ಮವಿಶ್ವಾಸ" ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ
ಸಶಸ್ತ್ರ ಪಡೆಗಳಿಗೆ ಗೌರವ
ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಪ್ರಾರಂಭವಾಗುತ್ತದೆ. ದೇಶವು ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಡಿಸೆಂಬರ್ 16 ರಂದು ದೇಶವು 1971ರ ಯುದ್ಧದ ಸುವರ್ಣ ಮಹೋತ್ಸವವನ್ನು (ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ 50ನೇ ವಾರ್ಷಿಕೋತ್ಸವ) ಆಚರಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ, ನಾನು ನಮ್ಮ ಸಶಸ್ತ್ರ ಪಡೆಗಳನ್ನು ನೆನಪಿಸಿಕೊಳ್ಳಲು, ಗೌರವಿಸಲು ಬಯಸುತ್ತೇನೆ, ”ಎಂದು ಪ್ರಧಾನಿ ಮೋದಿ ಹೇಳಿದರು.
ಕೊರೊನಾ ಇನ್ನೂ ಮುಗಿದಿಲ್ಲ..
ಕೋವಿಡ್ -19 ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲ. ಜನರು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿ ತಮ್ಮ ಮಾತನ್ನು ಕೊನೆಗೊಳಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ರೂಪಾಂತರಿ 'ಒಮಿಕ್ರೋನ್' ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಕುರಿತು ನಿನ್ನೆ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದರು.