ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸ್ಪರ್ಧಿಸಿರುವ ನಂದಿಗ್ರಾಮ ಫಲಿತಾಂಶ ಹೊರಬಿದ್ದಿದೆ.
ಮೊದಲು ಸಿಎಂ ಮಮತಾ ಗೆದ್ದಿದ್ದಾರೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಸುವೇಂದು ಜಯ ಸಾಧಿಸಿದ್ದಾರೆ ಎಂಬ ಘೋಷಣೆ ಹೊರಬಿದ್ದಿದೆ. ನಂದಿಗ್ರಾಮ ಕ್ಷೇತ್ರದ ಮತಎಣಿಕೆಯ 16ನೇ ಸುತ್ತಿನ ವೇಳೆ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿಗಿಂತಲೂ 1200 ಮತ ಹೆಚ್ಚಿಗೆ ಪಡೆದುಕೊಂಡು ಗೆಲುವು ದಾಖಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಟಿಎಂಸಿ ಹೇಳಿದ್ದೇನು?
ನಂದಿಗ್ರಾಮದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿಲ್ಲ. ಹೀಗಾಗಿ ಯಾವುದೇ ಸುಳ್ಳು ಸುದ್ದಿ ಹರಡಬೇಡಿ ಎಂದು ಟಿಎಂಸಿ ಹೇಳಿಕೊಂಡಿದೆ.
ಕೋರ್ಟ್ ಮೊರೆ ಹೋಗಲು ಮಮತಾ ನಿರ್ಧಾರ
ನಂದಿಗ್ರಾಮ ಚುನಾವಣಾ ಫಲಿತಾಂಶದ ಬಗ್ಗೆ ಒಬ್ಬೊಬ್ಬರಿಂದ ಒಂದೊಂದು ಹೇಳಿಕೆ ಬರಲು ಶುರುವಾಗುತ್ತಿದ್ದಂತೆ ಮಮತಾ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಮಾಧ್ಯಮಗೋಷ್ಟಿ ವೇಳೆ ಮಾತನಾಡಿರುವ ಮಮತಾ ಬ್ಯಾನರ್ಜಿ ನಾನು ತೀರ್ಪು ಸ್ವೀಕರಿಸುತ್ತೇನೆ. ಆದರೆ ಈ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುತ್ತೇನೆ. ಫಲಿತಾಂಶ ಘೋಷಣೆ ಬಳಿಕ ಕೆಲವೊಂದು ಸಂಗತಿ ನಡೆದಿದ್ದು, ಅದರ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ. ಜತೆಗೆ ನಾನು ನಂದಿಗ್ರಾಮದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಬಿಜೆಪಿ ಸೋತಿದೆ ಎಂದಿದ್ದಾರೆ.