ಹೈದರಾಬಾದ್, ತೆಲಂಗಾಣ: ನಗರದಲ್ಲಿ ಬೆಂಕಿ ಅವಘಡ (Fire Breaks Out) ಪ್ರಕರಣ ಮುನ್ನೆಲೆಗೆ ಬಂದಿದೆ. ವಿಜಯವಾಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗಾರ್ಮೆಂಟ್ಸ್ ಅಂಗಡಿ ಮತ್ತು ಪೀಠೋಪಕರಣಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸವನ್ನೇ ಪಡಬೇಕಾಯಿತು.
ಪ್ರಕರಣ ವಿವರ: ಹೈದರಾಬಾದ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವನಸ್ಥಲಿಪುರಂ ಪನಾಮದಲ್ಲಿ, ರಸ್ತೆಯ ಉದ್ದಕ್ಕೂ ಇರುವ ವಿಡೆಮ್ಸ್ ಬಟ್ಟೆ ಅಂಗಡಿ ಮತ್ತು ಪಕ್ಕದ ಪೀಠೋಪಕರಣಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎರಡು ಅಂಗಡಿಗಳು ಒಂದೇ ಮಾಲೀಕರಿಗೆ ಸೇರಿದ್ದಾಗಿವೆ.
ಗಾರ್ಮೆಂಟ್ಸ್ ಅಂಗಡಿ ಹಾಗೂ ಫರ್ನಿಚರ್ ಗೋದಾಮು ಮುಚ್ಚಿ ನಿರ್ವಾಹಕರು ಮನೆಗೆ ತೆರಳಿದ ಬಳಿಕ ಬೆಂಕಿ ಅವಘಡ ಸಂಭವಿಸಿದೆ. ಮೊದಲಿಗೆ ಗಾರ್ಮೆಂಟ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು, ಪಕ್ಕದ ಪೀಠೋಪಕರಣ ಗೋದಾಮಿಗೆ ಆವರಿಸಿಕೊಂಡಿದೆ. ಬೆಂಕಿಯ ರಭಸಕ್ಕೆ ಬಟ್ಟೆ ಅಂಗಡಿ ಮತ್ತು ಪೀಠೋಪಕರಣಗಳ ಗೋದಾಮಿನ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಬೆಂಕಿ ಅವಘಡದ ವೇಳೆ ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸ ಬೇಕಾಗಿದ್ದ ಪ್ರಾಣ ಹಾನಿ ತಪ್ಪಿದಂತಾಗಿದೆ.
ಇನ್ನು ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು. ಬಸ್‌ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಬೆಂಕಿ ಹೊತ್ತಿ ಉರಿಯುತ್ತಿದ್ದಾಗ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ, ಡಿಆರ್‌ಎಫ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.
ಐದು ಅಗ್ನಿಶಾಮಕ ವಾಹನಗಳೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು. ಬೆಂಕಿ ಅವಘಡದಲ್ಲಿ ಅಂಗಡಿಯಲ್ಲಿದ್ದ ಬಟ್ಟೆ ಹಾಗೂ ಗೋದಾಮಿನಲ್ಲಿದ್ದ ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪೊಲೀಸರು ಬೆಂಕಿ ಅನಾಹುತಕ್ಕೆ ಕಾರಣದ ಬಗ್ಗೆ ಗಮನ ಹರಿಸಿದ್ದಾರೆ. ಆದರೆ, ಅವಘಡ ನಡೆದಿರುವ ರೀತಿ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಅಂಗಡಿ ವ್ಯವಸ್ಥಾಪಕರು ದೂರುತ್ತಿದ್ದಾರೆ. ವಿದ್ಯುತ್‌ಗೆ ಸಂಬಂಧಿಸಿದಂತೆ ಎಲ್ಲಾ ಮೇನ್ ಸ್ವಿಚ್ಗಳು ಬಂದ್ ಮಾಡಿದ ನಂತರ ಅಪಘಾತ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಈ ಬೆಂಕಿ ಅವಘಡ ಹಿಂದೆ ಕೆಲವರ ಪಿತೂರಿ ಇದೆ ಎಂಬ ನಮ್ಮ ಅನುಮಾನವಿದೆ ಎಂಬುದು ಮಾಲೀಕರ ದೂರಾಗಿದೆ.
ನಗರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸಕಾಲದಲ್ಲಿ ಅಗ್ನಿಶಾಮಕ ದಳ ಅವಘಡ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದೆ. ಅಂಗಡಿ ಮಾಲೀಕರು ದೂರು ಸಲ್ಲಸಿದ್ದಾರೆ. ಎಲ್ಲಾ ವಿಷಯಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿಗಳು ಸಕಾಲದಲ್ಲಿ ಬೆಂಕಿಯನ್ನು ನಿಯಂತ್ರಿಸಿದ್ದರಿಂದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಓದಿ: ತಿರುಪತಿ ಗೋವಿಂದರಾಜಸ್ವಾಮಿ ದೇಗುಲ ಸಮೀಪದ ಕಟ್ಟಡದಲ್ಲಿ ಭಾರಿ ಬೆಂಕಿ ಅನಾಹುತ; ಮೂವರು ಸಿಲುಕಿರುವ ಶಂಕೆ