ಹೈದರಾಬಾದ್ (ತೆಲಂಗಾಣ): ನಗರದ ಮಣಿಕೊಂಡ ಬಳಿಯ ಲ್ಯಾಂಕೋ ಹಿಲ್ಸ್ ಹೆಸರು ಕೇಳಿದ್ರೆ ಮೊದಲು ನೆನಪಾಗುವುದು ಸದಾ ಕಾವಲು ಕಾಯುವ ಭದ್ರತಾ ಸಿಬ್ಬಂದಿ.. ಆ ಪ್ರದೇಶದ ಸುತ್ತಲೂ ಸಿಸಿಟಿವಿ ಕ್ಯಾಮೆರಾ.. ಆದರೆ ಸ್ಥಳೀಯರಿಗೆ ಇಷ್ಟೊಂದು ಕಟ್ಟುನಿಟ್ಟಿನ ರಕ್ಷಣಾ ಕ್ರಮಗಳಿದ್ದರೂ ಒಳಗೊಳಗೆ ನಡೆಯುತ್ತಿರುವ ದೌರ್ಜನ್ಯ ಆತಂಕಕ್ಕೆ ಕಾರಣವಾಗಿದೆ.
ಯುವತಿಯ ಸಾವಿಗೆ ಕಿರುಕುಳವೇ ಕಾರಣ: ಈ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಸಂಚಲನ ಮೂಡಿಸಿದೆ. ಆದ್ರೆ ಇತ್ತೀಚೆಗಷ್ಟೇ ಮಣಿಕೊಂಡ ಲ್ಯಾಂಕೋ ಹಿಲ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ತಂದೆ ಕೃಷ್ಣ ಅವರ ದೂರಿನ ಮೇರೆಗೆ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಸಾವಿಗೆ ಕಿರುಕುಳವೇ ಕಾರಣ ಎಂಬುದು ದೃಢಪಟ್ಟಿದೆ. ಪೊಲೀಸರ ತನಿಖೆಯಲ್ಲಿ ಉದ್ಯಮಿಯೂ ಆಗಿರುವ ಕನ್ನಡ ನಟನೊಬ್ಬನ ಕರಾಳ ಮುಖ ಬಯಲಾಗಿದೆ.
ವಿವಾಹೇತರ ಸಂಬಂಧಕ್ಕೆ ದಾರಿ: ಪೊಲೀಸರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯವರಾದ ಪೂರ್ಣಚಂದ್ ರಾವ್ ಅವರು ಕೆಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 10 ವರ್ಷಗಳ ಹಿಂದೆ ಹೈದರಾಬಾದ್ ನಗರಕ್ಕೆ ಬಂದು ಬಂಜಾರಾ ಹಿಲ್ಸ್ ನಲ್ಲಿ ಹೋಮ್ ಥಿಯೇಟರ್ ವ್ಯಾಪಾರ ಮಾಡುತ್ತಿದ್ದಾರೆ. ಮಣಿಕೊಂಡದ ಲ್ಯಾಂಕೋಹಿಲ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಪೂರ್ಣಚಂದ್ ರಾವ್ ಅವರು ತಮ್ಮ ಕುಟುಂಬದ ಜೊತೆ ವಾಸವಿದ್ದರು. ಇವರ ಜೊತೆ ಕಾಕಿನಾಡದ ಬಿಂದುಶ್ರೀ ಎಂಬ ಯುವತಿಯು ವಾಸಿಸುತ್ತಿದ್ದರು. ಬಿಂದು ಶ್ರೀ ಅವರು ಪೂರ್ಣಚಂದ್ ರಾವ್ ಅವರ ಮಗಳನ್ನು ನೋಡಿಕೊಳ್ಳಲು ಕಳೆದ 10 ವರ್ಷಗಳಿಂದ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪೂರ್ಣಚಂದ್ ಮತ್ತು ಕೇರ್ ಟೇಕರ್ ಮಧ್ಯೆ ಆತ್ಮೀಯತೆ ಹೆಚ್ಚಾಗಿ, ಬಳಿಕ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.
ಯುವತಿ ಆತ್ಮಹತ್ಯೆ: ಕೆಲ ದಿನಗಳಿಂದ ಇವರ ಮಧ್ಯೆ ಮನಸ್ತಾಪಗಳು ಮೂಡಲಾರಂಭಿಸಿವೆ. ಹೀಗಾಗಿ ಮಗಳನ್ನು ನೋಡಿಕೊಳ್ಳಲು ಪೂರ್ಣಚಂದ್ ರಾವ್ ಕೆಲ ದಿನಗಳ ಹಿಂದೆ ಮತ್ತೊಬ್ಬ ಯುವತಿಯನ್ನು ಮನೆಗೆ ಕರೆತಂದಿದ್ದರು. ಇದರಿಂದಾಗಿ ಶುಕ್ರವಾರ ರಾತ್ರಿ ಇವರ ಜಗಳ ತಾರಕಕ್ಕೇರಿತ್ತು. ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿಯವರೆಗೆ ಪರಸ್ಪರ ವಾಗ್ವಾದ ನಡೆಸಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಬಳಿಕ ಬಿಂದುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ರಾಯದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆಯಿಂದ ನಟನ ಕರಾಳ ಮುಖ ಬಯಲು: ಪೊಲೀಸ್ ತನಿಖೆಯಿಂದ ಕನ್ನಡ ನಟನ ಕರಾಳ ಮುಖ ಬಯಲಾಗಿದೆ. ಪೂರ್ಣಚಂದ್ ರಾವ್ ಅವರು ಕನ್ನಡ ಚಿತ್ರಗಳಲ್ಲಿ ನಟಿಸಿರುವುದಾಗಿ ಜಾಹೀರಾತು ನೀಡುತ್ತಿದ್ದರು. ಚಿತ್ರರಂಗದಲ್ಲಿ ತನ್ನ ಕಾಂಟ್ಯಾಕ್ಟ್ ಇರುವ ಹುಡುಗಿಯರಿಗೆ ಅವಕಾಶ ಕೊಡಿಸುವುದಾಗಿ ಆಸೆ ತೋರಿಸುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು, ಈ ಪ್ರಕರಣ ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ತಿಳಿದಿದ್ದರು. ಪ್ರಾಥಮಿಕ ತನಿಖೆ ಬಳಿಕ ಆರೋಪಿಯ ಕಿರುಕುಳದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಪೂರ್ಣಚಂದ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಬೆಂಗಳೂರು: ಮದ್ಯದ ಅಮಲಿನಲ್ಲಿ ನಡು ರಸ್ತೆ ಮೇಲೆ ಬಡಿದಾಡಿಕೊಂಡ ಯುವಕರು