ಹೈದರಾಬಾದ್ : ಇಬ್ಬರು ಸ್ನೇಹಿತರು ಬಿಟ್ಟು ಹೋದ ತಮ್ಮ ಹೆಂಡತಿಯರನ್ನು ಅತ್ತೆಮನೆಯಿಂದ ಮರಳಿ ಕರೆತರಲು ಆತ್ಮಹತ್ಯೆ ವಿಡಿಯೋವೊಂದನ್ನು ಮಾಡಲು ಮುಂದಾಗಿ ಅನಾಹುತ ಮಾಡಿಕೊಂಡಿದ್ದಾರೆ. ಈ ಘಟನೆ ಕೆಲವು ದಿನಗಳ ಹಿಂದೆ ರಂಗಾರೆಡ್ಡಿ ಜಿಲ್ಲೆಯ ಶಾದ್ನಗರ ಕ್ಷೇತ್ರದಲ್ಲಿ ಸಂಭವಿಸಿದೆ.
ಚಕಾಲಿ ಶ್ರೀನು (35), ಪುಲಗೋಲ್ಲಾ ಜಗನ್ (34) ಅಪೆರೆಡ್ಡಿ ಗುಡಾ ಗ್ರಾಮದ ನಿವಾಸಿಗಳಾಗಿದ್ದು, ಜಗನ್ ಅವರ ಪತ್ನಿ 6 ತಿಂಗಳ ಹಿಂದೆ ತಾಯಿಯ ಮನೆಗೆ ಹೋಗಿದ್ದರೆ, ಶ್ರೀನು ಅವರ ಪತ್ನಿ ಇತ್ತೀಚೆಗೆ ತೆರಳಿದ್ದರು.
ಈ ತಿಂಗಳ 26 ರಂದು ಅವರು 6 ಬಿಯರ್ ಬಾಟಲಿಗಳನ್ನು ಖರೀದಿಸಿ ಹಳ್ಳಿಯ ಹೊರವಲಯಕ್ಕೆ ತೆರಳಿದ್ದಾರೆ. ಅಲ್ಲಿ ಕುಡಿದ ನಂತರ ಅವರು ತಮ್ಮ ಪೂರ್ವ ಯೋಜನೆಯಂತೆ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮರಕ್ಕೆ ನೇತುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸುವ ವಿಡಿಯೋವನ್ನು ಅವರ ಹೆಂಡತಿಯರಿಗೆ ಕಳುಹಿಸುವ ಯೋಜನೆ ಇದಾಗಿತ್ತು. ಮೊದಲು ಜಗನ್ ನೇಣು ಹಾಕಿಕೊಳ್ಳುವ ಕಸರತ್ತನ್ನು ನಡೆಸಿದ್ದಾನೆ.
ಶ್ರೀನು ಇದನ್ನು ವಿಡಿಯೋ ಮಾಡಲು ಮುಂದಾಗಿದ್ದಾನೆ. ಆದರೆ, ಕುಡಿದ ಮತ್ತಿನಲ್ಲಿದ್ದ ಶ್ರೀನು ವಿಡಿಯೋ ಮಾಡಲು ತಡಮಾಡಿದ್ದರ ಪರಿಣಾಮ ಹಗ್ಗ ಬಿಗಿದುಕೊಂಡಿದ್ದ ಜಗನ್ ಕೋಮಾಕ್ಕೆ ಹೋಗಿದ್ದಾನೆ.
ಇದನ್ನು ಗಮನಿಸಿದ ನಂತರ ಶ್ರೀನು, ಕೂಡಲೇ ಗ್ರಾಮಸ್ಥರ ಸಹಾಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವಿಡಿಯೋ ವಿಷಯ ಹೊರ ಬಂದ ನಂತರ ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಗಿದೆ.
ವಿಡಿಯೋದಲ್ಲಿ ಶ್ರೀನು ಜಾತಿ ಹೆಸರಿನಲ್ಲಿ ಜಗನ್ಅನ್ನು ಅವಮಾನಿಸಿದ್ದಾನೆ ಎಂದು ಆರೋಪಿಸಿ ಜಗನ್ ತಂದೆ ರಾಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆತನ ದೂರಿನ ಪ್ರಕಾರ ಪೊಲೀಸರು ಶ್ರೀನು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.