ಆಗ್ರಾ (ಉತ್ತರ ಪ್ರದೇಶ): ಇಲ್ಲಿನ ಖಾಸಗಿ ಆಸ್ಪತ್ರೆಯೊಂದು ಮಹಿಳೆಯ ಶವ ನೀಡುವ ಮೊದಲು 12 ಲಕ್ಷ ರೂ. ಬಿಲ್ ಪಾವತಿಸುವಂತೆ ಆಕೆಯ ಪತಿಗೆ ಒತ್ತಾಯಿಸಿದ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಮೃತ ಮಹಿಳೆಯ ಪತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
12 ಲಕ್ಷ ರೂ. ಬಿಲ್ ಪಾವತಿಸಿದ ಬಳಿಕವೇ ಅಂದರೆ ಸುಮಾರು 8 ಗಂಟೆಗಳ ಬಳಿಕ ಕುಟುಂಬಕ್ಕೆ ಮೃತದೇಹ ನೀಡಲಾಗಿದೆ. ಖಾಸಗಿ ಆಸ್ಪತ್ರೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೇ 25ರಂದು ಕೊರೊನಾ ಸೋಂಕಿತ ಮಹಿಳೆಗೆ ಉಸಿರಾಟದ ತೊಂದರೆ ಹಾಗೂ ಆಮ್ಲಜನಕದ ಮಟ್ಟ ಕಡಿಮೆಯಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ.