ಹಿಸಾರ್ (ಹರಿಯಾಣ): ಬೇರೊಬ್ಬ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿರುವ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು 29 ವರ್ಷದ ರಾಜಬಾಲಾ ಎಂದು ಗುರುತಿಸಲಾಗಿದೆ. ಆರೋಪಿ ಪತಿ ರೋಷನ್‌ಲಾಲ್ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಇಲ್ಲಿನ ಲಂಧಾರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಈ ಹತ್ಯೆ ನಡೆದಿದೆ. ಈ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 12 ಸೆಕೆಂಡುಗಳಲ್ಲಿ 10 ಬಾರಿ ಪತ್ನಿ ರಾಜಬಾಲಾ ಮೇಲೆ ರೋಷನ್‌ಲಾಲ್ ದಾಳಿ ಮಾಡಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿವ್ ಇನ್ ರಿಲೇಶನ್ಶಿಪ್: ಕೊಲೆಯಾದ ರಾಜಬಾಲಾ ಮತ್ತು ರೋಷನ್‌ಲಾಲ್ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ಈಕೆ ನೆರೆ ಹೊರೆಯಲ್ಲಿ ವಾಸಿಸುವ ಅಶೋಕ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ನಂತರ ಅಶೋಕ್ ಜೊತೆ ಓಡಿ ಹೋಗಿದ್ದಳು. ಹಲವು ತಿಂಗಳಿಂದ ಗ್ರಾಮ ತೊರೆದು ಪ್ರಿಯಕರನೊಂದಿಗೆ ಲಿವ್ ಇನ್ ರಿಲೇಶನ್ಶಿಫ್ನಲ್ಲಿ ಜೀವನ ಸಾಗಿಸುತ್ತಿದ್ದಳು.
ಇದನ್ನೂ ಓದಿ: ಕಷ್ಟ ಕಾಲದಲ್ಲಿ ಮಗು ಮಾರಾಟ; ಕಂದನ ನೆನಪು ಕಾಡಿ, ಮರಳಿ ಕೇಳಿದ್ದಕ್ಕೆ ತಾಯಿ ಹತ್ಯೆ!
ಇದರ ನಡುವೆ ರಾಜಬಾಲಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ತನ್ನ ಪ್ರಿಯಕರನೊಂದಿಗೆ ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಮರಳಿದ್ದಳು. ಮತ್ತೊಂದೆಡೆ, ರೋಷನ್‌ಲಾಲ್ ತನ್ನ ಪತ್ನಿ ರಾಜಬಾಲಾ ಮತ್ತು ಆಕೆಯ ಪ್ರಿಯಕರ ಅಶೋಕ್ ಒಟ್ಟಿಗೆ ಇರುವುದನ್ನು ಪ್ರತಿದಿನ ನೋಡುತ್ತಿದ್ದ. ಹೀಗಾಗಿ ಕೋಪಗೊಂಡು ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. ಹಲವು ದಿನಗಳಿಂದ ಸಂಚು ರೂಪಿಸಿದ್ದ ರೋಷನ್‌ಲಾಲ್ ಅವಕಾಶಕ್ಕಾಗಿ ಕಾಯುತ್ತಿದ್ದ. ಇತ್ತ, ಬುಧವಾರ ನಿತ್ಯದ ತಪಾಸಣೆಗೆಂದು ಪಿಎಚ್‌ಸಿ ಕೇಂದ್ರಕ್ಕೆ ರಾಜಬಾಲಾ ಮತ್ತೊಬ್ಬ ಮಹಿಳೆಯೊಂದಿಗೆ ಬಂದಿದ್ದಳು. ಆಗ ಆಕೆಯನ್ನು ಹಿಂಬಾಲಿಸುತ್ತಿದ್ದ ರೋಷನ್‌ಲಾಲ್ ಸಹ ಆರೋಗ್ಯ ಕೇಂದ್ರದ ಬಳಿಗೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ರಾಜಬಾಲಾ ಪಿಎಚ್‌ಸಿ ಕೇಂದ್ರದಿಂದ ಹೊರ ಬಂದ ತಕ್ಷಣ ಹೊಂಚು ಹಾಕಿ ಏಕಾಏಕಿ ಆರೋಪಿ ಪತಿ ದಾಳಿ ಮಾಡಿದ್ದಾನೆ. ಆಗ ಜೊತೆಗಿದ್ದ ಮತ್ತೊಬ್ಬ ಮಹಿಳೆ ರಾಜಬಾಲಾಳ ರಕ್ಷಣೆಗೆ ಧಾವಿಸುತ್ತಿದ್ದಾಳೆ. ಆದರೆ, ಆಕೆಯನ್ನು ಆರೋಪಿ ದೂರ ತಳ್ಳಿ ನಿರಂತರವಾಗಿ ದಾಳಿ ನಡೆಸಿದ್ದಾನೆ. ಇದೇ ವೇಳೆ ಸಮೀಪದಲ್ಲಿದ್ದ ಕೆಲವರು ದೌಡಾಯಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ರಾಜಬಾಲಾ ಪ್ರಾಣಪಕ್ಷಿ ಹಾರಿಹೋಗಿದೆ. ಈ ಎಲ್ಲ ದೃಶ್ಯ ಪಿಎಚ್‌ಸಿ ಕೇಂದ್ರದಲ್ಲಿ ಅವಳಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಅಗ್ರೋಹಾ ಪೊಲೀಸ್ ಠಾಣೆಯ ಪ್ರಭಾರಿ ಪ್ರತಾಪ್ ಸಿಂಗ್ ಪ್ರತಿಕ್ರಿಯಿಸಿ, ಗರ್ಭಿಣಿಯಾಗಿದ್ದ ರಾಜಬಾಲಾ ಆರೋಗ್ಯ ತಪಾಸಣೆಗೆಂದು ಸಿಮ್ರಾನ್ ಎಂಬ ಮಹಿಳೆಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರು ಪಿಎಚ್‌ಸಿ ಕೇಂದ್ರದಿಂದ ಹೊರ ಬರುತ್ತಿದ್ದಾಗ ರಾಜಬಾಲಾ ಮೇಲೆ ಆರೋಪಿ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಕಾನ್ಸ್ಟೇಬಲ್ ಆತ್ಮಹತ್ಯೆ