ಹೈದರಾಬಾದ್(ತೆಲಂಗಾಣ): ಅಮೂಲ್ಯವಾದ ಜೀವನವನ್ನು ಕ್ಷುಲ್ಲಕ ಕಾರಣಕ್ಕಾಗಿ ಕೆಲವರು ಬಲಿ ಕೊಡುತ್ತಾರೆ. ಅಂಥದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪತ್ನಿ ತನಗೆ ರೊಟ್ಟಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ನೊಂದ ಪತಿ ನೇಣು ಬಿಗಿದುಕೊಂಡು ಸಾವಿನ ಮನೆ ಸೇರಿದ್ದಾನೆ.
ಬಿಹಾರ ಮೂಲದ ಮೊಹಮ್ಮದ್ ಸಾಬರ್ (30) ಮೃತ ವ್ಯಕ್ತಿ. ಸಂಗಾರೆಡ್ಡಿ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಮೊಹಮ್ಮದ್ ಸಾಬರ್ ಜಿಲ್ಲೆಯ ಪಾಸಮೈಲಾರಂ ಗ್ರಾಮದಲ್ಲಿ ಕುಟುಂಬಸಮೇತ ಕೆಲ ವರ್ಷಗಳಿಂದ ವಾಸವಾಗಿದ್ದನು.
ಸೋಮವಾರ ರಾತ್ರಿ ಕೆಲಸ ಮುಗಿಸಿ ದಣಿದು ಮನೆಗೆ ಬಂದ ಸಾಬರ್, ರೊಟ್ಟಿ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಆಕೆ ಗಂಡನ ಮೇಲೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದರಿಂದ ರೊಟ್ಟಿ ಮಾಡಲು ನಿರಾಕರಿಸಿದಳು. ಇದರಿಂದ ಕೋಪಗೊಂಡ ಮೊಹಮ್ಮದ್ ಸಾಬರ್ ಇದು ತನಗಾದ ಅವಮಾನ ಎಂದೇ ಪರಿಗಣಿಸಿ ಮಧ್ಯರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಪತ್ನಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತನ ಪತ್ನಿ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ಆತನ ಆತ್ಮಹತ್ಯೆಗೆ ಕಾರಣ ರೊಟ್ಟಿಯೇ ಎಂಬುದು ತಿಳಿದುಬಂದಿದೆ. ಬಿಡಿಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್ ಕುರಿತು ಮಹತ್ವದ ಆದೇಶ