ಗುವಾಹಟಿ (ಅಸ್ಸೋಂ): ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ವಕೀಲರೊಬ್ಬರು ತನ್ನ ಪತ್ನಿಗೆ ಕಳೆದ 15 ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಅಸ್ಸೋಂನ ದಿಬ್ರುಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಪತಿ ವಿಜಯೇಂದ್ರ ಮೌರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮಾರ್ಗರಿಟಾ ನ್ಯಾಯಾಲಯದಲ್ಲಿ ಆರೋಪಿ ವಿಜಯೇಂದ್ರ ಮೌರ್ಯ ವಕೀಲನಾಗಿ ಕೆಲಸ ಮಾಡುತ್ತಿದ್ದು, 2003ರಲ್ಲಿ ಮೊದಲ ಮದುವೆಯಾಗಿದ್ದರು. ಆದರೆ, ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆರೋಗ್ಯ ಸಮಸ್ಯೆಯಿಂದ ಪತ್ನಿ ಮತ್ತೆ ಮಕ್ಕಳನ್ನು ಹೊಂದಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಪತಿ ತನ್ನ ಹೆಂಡತಿಯನ್ನು ಹಿಂಸಿಸಲು ಪ್ರಾರಂಭಿಸಿದ್ದರು. ಗಂಡು ಮಗುವಿಗೆ ಜನ್ಮ ನೀಡುತ್ತಿಲ್ಲ ಎಂಬ ಏಕೈಕ ಕಾರಣದಿಂದ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಪತ್ನಿಗೆ ದೈಹಿಕ ಮತ್ತು ಮಾನಸಿಕ ನೀಡುವ ಶಿಕ್ಷೆಯ ದೃಶ್ಯಗಳು ಮೊಬೈಲ್ ಕ್ಯಾಮರಾಗಳಲ್ಲೂ ಸೆರೆಯಾಗಿವೆ. ಇದರ ಆಧಾರದ ಮೇಲೆ ವಿಜಯೇಂದ್ರ ಮೌರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚ್ಛೇದನ ನೀಡದ ಎರಡನೇ ಮದುವೆ: ಇಷ್ಟೇ ಅಲ್ಲ, ಗಂಡು ಮಗುವನ್ನು ಹೊಂದುವ ದೃಷ್ಟಿಯಿಂದ ಆರೋಪಿ ವಕೀಲ ತಮ್ಮ ಮೊದಲ ಹೆಂಡತಿಗೆ ಕಾನೂನು ಬದ್ಧವಾಗಿ ವಿಚ್ಛೇದನ ನೀಡಿಲ್ಲ. ಆದರೂ, ಬೇರೆ ಮಹಿಳೆಯೊಂದಿಗೆ ಮತ್ತೊಂದು ಮದುವೆಯಾಗಿದ್ದಾರೆ. ಪ್ರಸ್ತುತ ಎರಡನೇ ಹೆಂಡತಿಯನ್ನು ಹೊಂದಿರುವ ಆರೋಪಿ, ಈ ಮಹಿಳೆಯಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ ಎಂದು ಮೊದಲ ಪತ್ನಿಯ ಸಂಬಂಧಿಕರು ದೂರಿದ್ದಾರೆ.
ಎರಡನೇ ಮದುವೆ ಬಗ್ಗೆ ಈ ಹಿಂದೆಯೇ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಆಗ ವಿಜಯೇಂದ್ರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ವಿಜಯೇಂದ್ರ ಈ ಮೊದಲು ವಕೀಲರಾಗಿರಲಿಲ್ಲ. ನಮ್ಮ ಕುಟುಂಬದ ಬೆಂಬಲ ಮತ್ತು ಆರ್ಥಿಕ ನೆರವಿನಿಂದ ವಕೀಲರಾಗಿದ್ದಾರೆ. ಸದ್ಯ ಚಿತ್ರಹಿಂಸೆಯ ಬಗ್ಗೆ ಸಾಕ್ಷ್ಯಗಳ ಸಮೇತ ಪೊಲೀಸರಿಗೆ ಸಂತ್ರಸ್ತೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: 11 ವರ್ಷಗಳಿಂದ ತವರು ಮನೆಯ ಸಂಪರ್ಕಕ್ಕೆ ಸಿಗದಂತೆ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ಗಂಡ!
11 ವರ್ಷ ಗೃಹ ಬಂಧನದಲ್ಲಿದ್ದ ಆಂಧ್ರದ ಮಹಿಳೆ: ಮತ್ತೊಂದೆಡೆ, ಕಳೆದ ಮಾರ್ಚ್ ತಿಂಗಳಲ್ಲಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ವರದಿಯಾಗಿತ್ತು. ಗೋದಾವರಿ ಮಧುಸೂದನ್ ಎಂಬ ಆರೋಪಿ ವಕೀಲ ತಮ್ಮ ಪತ್ನಿಯನ್ನು ಸತತವಾಗಿ 11 ವರ್ಷಗಳ ಕಾಲ ಹೊರ ಪ್ರಪಂಚದಿಂದ ದೂರುವಿಟ್ಟು ಮನೆಯಲ್ಲೇ ಬಂಧಿಸಿದ್ದರು. ಸುದೀರ್ಘ ದಿನಗಳಿಂದ ಮಗಳು ಸಂಪರ್ಕಕ್ಕೆ ಸಿಗದ ಕಾರಣ ಆಕೆಯ ಪೋಷಕರು ಪೊಲೀಸರ ಮೊರೆ ಹೋದ ನಂತರ, ಗೃಹ ಬಂಧನದಿಂದ ಈ ಮಹಿಳೆಗೆ ಮುಕ್ತಿ ಸಿಕ್ಕಿತ್ತು.
ಶ್ರೀಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಗೆ ಸೇರಿದ ಸಾಯಿ ಸುಪ್ರಿಯಾ ಅವರನ್ನು 2008ರಲ್ಲಿ ಮಧುಸೂದನ್ಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಮಧುಸೂದನ್ ತನ್ನ ತಾಯಿ ಹಾಗೂ ಸಹೋದರ ಮಾತು ಕೇಳಿ ಸಾಯಿ ಸುಪ್ರಿಯಾರನ್ನು ಮನೆಯಲ್ಲೇ ಕೂಡಿ ಹಾಕಿ ತವರು ಮನೆಯವರ ಸಂಪರ್ಕಕ್ಕೂ ಬಾರದಂತೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದರು.