ತಂಜಾವೂರು: ಕುಂಭಕೋಣಂ ಪುರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಮೇಯರ್ ಚುನಾವಣೆಯಲ್ಲಿ ಆಟೋ ಚಾಲಕ ಸರವಣನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರದ್ಧೆ, ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ಸರವಣನ್ ಕುಂಭಕೋಣಂ ನಗರದ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಎಂಕೆ ಮತ್ತು ಮಿತ್ರ ಪಕ್ಷಗಳು 48ರಲ್ಲಿ 42 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದು, ಸರವಣನ್ ಅವರು 17ನೇ ವಾರ್ಡ್ನಿಂದ ಚುನಾಯಿತರಾಗಿದ್ದಾರೆ. ಡಿಎಂಕೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ಗೆ ನೀಡಿದ ಕಾರಣ ತಮಿಳುನಾಡು ಕಾಂಗ್ರೆಸ್ ಕಮಿಟಿ ಸರವಣನ್ ಅವರನ್ನು ತಮ್ಮ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ಸರವಣನ್ ಅವರು ಕುಂಭಕೋಣಂ ನಗರದ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಪಕ್ಷಕ್ಕಾಗಿ ಅತ್ಯಂತ ವಿಧೇಯನಾಗಿ ಕೆಲಸ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆರನೇ ತರಗತಿವರೆಗೆ ಓದಿರುವ ಸರವಣನ್, ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದು, ಪತ್ನಿ ಹಾಗೂ ಮೂವರು ಪುತ್ರರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ವಿಶೇಷವೆಂದರೆ ಸರವಣನ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಹಾನಗರ ಪಾಲಿಕೆ ಕಚೇರಿಗೆ ತಮ್ಮ ಆಟೋದಲ್ಲೇ ಬಂದಿಳಿದಿದ್ದು ಗಮನ ಸೆಳೆಯುವಂತಿತ್ತು.