ನಾಸಿಕ್(ಮಹಾರಾಷ್ಟ್ರ) : ಮಹಾರಾಷ್ಟ್ರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುಂಬೈ ನಾಕಾ ಪ್ರದೇಶದ ಕಟ್ಟಡದ ನೆಲಮಾಳಿಗೆಯಲ್ಲಿನ ಸ್ಕ್ರಾಪ್ ಅಂಗಡಿಯಲ್ಲಿ ಮಾನವ ದೇಹದ ಬಿಡಿ ಭಾಗಗಳು ಪತ್ತೆಯಾಗಿವೆ. ಕಳೆದೆರಡು ದಿನಗಳಿಂದ ಅಂಗಡಿಯಿಂದ ದುರ್ವಾಸನೆ ಬರುತ್ತಿತ್ತಂತೆ. ಘಟನೆ ಸಂಬಂಧ ಭಾನುವಾರ ತಡರಾತ್ರಿ ಸುತ್ತಮುತ್ತಲ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಆಘಾತಕ್ಕೊಳಗಾಗಿದ್ದಾರೆ.
ಹೌದು, ಅಂಗಡಿಯು ಸ್ಕ್ರ್ಯಾಪ್ ವಸ್ತುಗಳಿಂದ ತುಂಬಿತ್ತು. ಆದರೆ, ಅಲ್ಲಿದ್ದ ಎರಡು ಪ್ಲಾಸ್ಟಿಕ್ ಪಾತ್ರೆಗಳನ್ನು ತೆರೆದಾಗ ಮಾನವನ ಕಿವಿ, ಮೆದುಳು, ಕಣ್ಣುಗಳು ಮತ್ತು ಮುಖದ ಕೆಲವು ಭಾಗಗಳು ಕಂಡುಬಂದಿವೆ. ಹೆಚ್ಚಿನ ತನಿಖೆಗಾಗಿ ಫೋರೆನ್ಸಿಕ್ ತಂಡವು ಅವಶೇಷಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು
ಈ ಅಂಗಡಿಯ ಮಾಲೀಕರ ಇಬ್ಬರು ಪುತ್ರರು ವೈದ್ಯರಾಗಿದ್ದಾರೆ. ಆದ್ದರಿಂದ ಈ ಭಾಗಗಳನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಸಂರಕ್ಷಿಸಿರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದಾಗ್ಯೂ, ಎಲ್ಲಾ ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮುಂಬೈ ನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.