ತಿರುವನಂತಪುರ: ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಜನದಟ್ಟಣೆಯೂ ಉಂಟಾಗಿದೆ. ದೇವರ ದರ್ಶನಕ್ಕೆ 20 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಇದೆ. ನಿರೀಕ್ಷೆಗೂ ಮೀರಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರೂ ಈ ವರ್ಷ ಆದಾಯದಲ್ಲಿ ಕುಸಿತವಾಗಿದೆ. ದೇಗುಲದ ಆಡಳಿತ ನಡೆಸುವ ಟ್ರವಾಂಕೂರ್ ದೇವಸ್ವಂ ಬೋರ್ಡ್ ಶುಕ್ರವಾರ ಈ ಮಾಹಿತಿ ನೀಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸುಮಾರು 20 ಕೋಟಿ ರೂ ಆದಾಯ ಕಡಿಮೆಯಾಗಿದೆ. ಕಳೆದ 28 ದಿನದಲ್ಲಿ ಅಂದರೆ ನವೆಂಬರ್ 17ರಿಂದ ಇಲ್ಲಿಯವರೆಗೆ ಅಪ್ಪಮ್ ಮತ್ತು ಪಾಯಸಂ ಮಾರಾಟ ಮತ್ತು ದೇವರಿಗೆ ಸಮರ್ಪಣೆಯಿಂದ 134.44 ಕೋಟಿ ರೂ ಆದಾಯ ಬಂದಿದೆ. ಕಳೆದ ವರ್ಷ ಅಂದರೆ 2022ರ 28 ದಿನದಲ್ಲಿ 154 ಕೋಟಿ ರೂ ಆದಾಯ ಬಂದಿತ್ತು.
ನವೆಂಬರ್ 17ರಿಂದ ಇಲ್ಲಿಯವರೆಗೆ ಒಟ್ಟು 28 ದಿನ ಕ್ಷೇತ್ರಕ್ಕೆ 17.52 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಮುಂದಿನ 33 ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶವಿದ್ದು, ಇದಾದ ಬಳಿಕ ಈ ವರ್ಷದ ಮಂಡಲ ಮಕರವಿಲಕ್ಕು ಭಕ್ತರ ಋತುಮಾನ ಕೊನೆಯಾಗಲಿದೆ.
ಜನ ದಟ್ಟಣೆಯ ಹಿನ್ನೆಲೆಯಲ್ಲಿ ದಿನಕ್ಕೆ 90 ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶವಿದ್ದು, ಮುಂದಿನ ದಿನಗಳಲ್ಲಿ 29.70 ಲಕ್ಷ ಮಂದಿ ಭಕ್ತರು ದರ್ಶನ ಪಡೆಯಬಹುದು. ಈ ಋತುಮಾನದಲ್ಲಿ ಒಟ್ಟಾರೆ (ಕಳೆದ 28 ದಿನ ಮತ್ತು ಮುಂದಿನ 33 ದಿನ) 47.22 ಲಕ್ಷ ಜನರು ದರ್ಶನ ಪಡೆಯಲಿದ್ದಾರೆ.
ಕಳೆದ ವರ್ಷ ಈ ಋತುಮಾನದಲ್ಲಿ 65 ಲಕ್ಷ ಮಂದಿ ಭೇಟಿ ನೀಡಿದ್ದು, 351 ಕೋಟಿ ರೂ ಆದಾಯ ಬಂದಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದಾಗ 16 ಲಕ್ಷ ಮಂದಿ ಭಕ್ತರ ಸಂಖ್ಯೆ ಕೂಡ ಕಡಿಮೆಯಾಗಿದೆ. ಅಲ್ಲದೇ, ಆದಾಯವೂ ತಗ್ಗಿದೆ. ಆದರೂ, ಈ ವಾರಾರಂಭದಲ್ಲಿ ಭಕ್ತರ ಸಂಖ್ಯೆಯಲ್ಲಿ ದಟ್ಟಣೆ ಉಂಟಾಗಿ, ಹಲವರು ಸಂಕಷ್ಟ ಅನುಭವಿಸಿದರು. ಈ ಹಿಂದೆಲ್ಲಾ ದರ್ಶನಕ್ಕೆ 5ರಿಂದ 6 ಗಂಟೆ ಕಾಲ ಕಾಯುತ್ತಿದ್ದ ಭಕ್ತರು ದೇವರ ದರ್ಶನಕ್ಕೆ ಈ ಸಲ 20 ಗಂಟೆಗಳಷ್ಟು ಕಾಯುವ ಪರಿಸ್ಥಿತಿ ಉಂಟಾಗಿತ್ತು. ನಿರ್ವಹಣೆಯಲ್ಲಿ ಉಂಟಾದ ಲೋಪದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ