ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ರೈತರು ಸಮರ ಸಾರಿದ್ದು, ಕೇಂದ್ರ ಸರ್ಕಾರ ಹಲವು ಬಾರಿ ಮಾತುಕತೆಯ ಮೂಲಕ ರೈತರ ಮನವೊಲಿಸಲು ಪ್ರಯತ್ನಿಸಿದರೂ ವಿಫಲವಾಗಿದೆ. ಕೇಂದ್ರದ ಭರವಸೆಗೆ ತೃಪ್ತರಾಗದ ರೈತರು ಮಂಗಳವಾರ (ಇಂದು) ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.
ಡಿಸೆಂಬರ್ 4ರಂದು ರೈತರು ಸಭೆ ನಡೆಸಿ ಭಾರತ್ ಬಂದ್ ನಿರ್ಣಯ ಕೈಗೊಂಡಿದ್ದಾರೆ. ಡಿಸೆಂಬರ್ 5ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದರೆ, ಇತ್ತ ಕಡೆ ಪ್ರತಿಭಟನಾನಿರತ ರೈತರು ಕೇಂದ್ರ ಸಚಿವರು ಮತ್ತು ಕಾರ್ಪೋರೇಟ್ ಕಂಪನಿ ಮಾಲೀಕರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದರು.
ಕೇಂದ್ರ ಸರ್ಕಾರ ತಿದ್ದುಪಡಿ ತಂದು ಜಾರಿ ಮಾಡಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಸಮ್ಮತಿಸಿದರೆ ಮತ್ತು ಎಲ್ಲಾ 23 ಬೆಳೆಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತರಿ ನೀಡಿದರೆ ಮಾತ್ರ ಸರ್ಕಾರದೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲು ರೈತ ಮುಖಂಡರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರೈತರು ಟೋಲ್ ಪ್ಲಾಜಾ ಘೇರಾವ್ ನಡೆಸಲು ಕೂಡ ಚಿಂತನೆ ನಡೆಸಿದ್ದಾರೆ. ಕೇಂದ್ರ ಹೊಸದಾಗಿ ಜಾರಿ ಮಾಡಿರುವ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಭರವಸೆ ನೀಡಿ, ಎಂಎಸ್ಪಿ ಕುರಿತಂತೆ ಲಿಖಿತ ಭರವಸೆ ನೀಡಿದರೆ, ಅದು ಸರ್ಕಾರಕ್ಕೆ ಹಿನ್ನೆಡೆಯಾದಂತಾಗುತ್ತದೆ. ಹಾಗಾಗಿ ಸರ್ಕಾರ ಶಾಂತಿ, ಸುವ್ಯವಸ್ಥೆ ಕಾಪಾಡಲು ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. 2015ರಲ್ಲಿ ಕೂಡ 2013ರ ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ ಕೈಬಿಡುವ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಬಳಿಕ ಯು ಟರ್ನ್ ಹೊಡೆದಿದ್ದರು.
ರೈತರು ಮತ್ತು ಸರ್ಕಾರದ ನಡುವಿನ ಆರನೇ ಸುತ್ತಿನ ಮಾತುಕತೆ ಡಿಸೆಂಬರ್ 9ರಂದು ನಿಗದಿಯಾಗಿದೆ. ಆದರೆ ಈ ನಡುವೆ ಡಿಸೆಂಬರ್ 8ರಂದು ರೈತರು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.
ದೇಶಾದ್ಯಂತ ಮಾರುಕಟ್ಟೆಗಳು ತೆರೆದಿರುತ್ತವೆ:
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮತ್ತು ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ (ಎಟ್ವಾ) ಡಿಸೆಂಬರ್ 8ರ ಭಾರತ್ ಬಂದ್‌ಗೆ ದೇಶದ ಮಾರುಕಟ್ಟೆ ಮತ್ತು ಸಾರಿಗೆಯನ್ನು ಸೇರಿಸಲಾಗಿಲ್ಲ ಎಂದು ತಿಳಿಸಿದೆ. ದೆಹಲಿ ಸೇರಿದಂತೆ ದೇಶಾದ್ಯಂತ ಮಾರುಕಟ್ಟೆಗಳು ಸಂಪೂರ್ಣವಾಗಿ ತೆರೆದಿರಲಿವೆ ಮತ್ತು ವ್ಯಾಪಾರ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲಿವೆ. ಸಾರಿಗೆ ವ್ಯವಸ್ಥೆ ಕೂಡ ಎಂದಿನಂತೆ ಇರಲಿದೆ.
ಪಂಜಾಬ್‌ನ ಪೆಟ್ರೋಲ್ ಬಂಕ್ಗಳು:
ಭಾರತ್ ಬಂದ್ ಕರೆಗೆ ಬೆಂಬಲವಾಗಿ ಇಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಪೆಟ್ರೋಲ್ ಬಂಕ್ ಮುಚ್ಚಲಾಗುವುದು ಎಂದು ಪಂಜಾಬ್ ಪೆಟ್ರೋಲಿಯಂ ಮಾರಾಟಗಾರರ ಸಂಘ ತಿಳಿಸಿದೆ.
ಭಾರತ್ ಬಂದ್‌ಗೆ ಪ್ರತಿಪಕ್ಷಗಳ ಬೆಂಬಲ:
ಭಾರತ್ ಬಂದ್‌ಗೆ ಕಾಂಗ್ರೆಸ್, ಎನ್‌ಸಿಪಿ, ಟಿಆರ್‌ಎಸ್, ಡಿಎಂಕೆ, ಎಎಪಿ ಟಿಎಂಸಿ, ಆರ್‌ಜೆಡಿ ಮತ್ತು ಎಡ ಪಕ್ಷಗಳು ಬೆಂಬಲ ಸೂಚಿಸಿವೆ.
10 ಕೇಂದ್ರ ಕಾರ್ಮಿಕ ಸಂಘಗಳ ಬೆಂಬಲ:
10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಭಾರತ್ ಬಂದ್‌ಗೆ ಬೆಂಬಲ ಘೊಷಿಸಿದೆ. ಕಾರ್ಮಿಕ ಮತ್ತು ಕೃಷಿ ಕಾನೂನುಗಳನ್ನು ವಿರೋಧಿಸಿ ಈ ಸಂಘಟನೆಗಳ ಒಕ್ಕೂಟ ನವೆಂಬರ್ 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಹೆಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ( ಎಐಯುಟಿಯುಸಿ), ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್ (ಟಿಯುಸಿಸಿ), ಸ್ವಯಂ ಉದ್ಯೋಗಿ ಮಹಿಳಾ ಸಂಘ (ಎಸ್ಇಡಬ್ಲ್ಯುಎ), ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಒಕ್ಕೂಟ (ಎಲ್ಪಿಎಫ್) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ) ಬಂದ್‌ಗೆ ಬೆಂಬಲ ಘೋಷಿಸಿವೆ.
ಕಾಯ್ದೆಗಳು ಕಾನೂನು ಬಾಹಿರ: ಸುಪ್ರೀಂ ಕೋರ್ಟ್ ವಕೀಲರ ಸಂಘದ ಮುಖ್ಯಸ್ಥ
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಶ್ಯಂತ್ ದಾವೆ, ಕೇಂದ್ರದ ಕೃಷಿ ಕಾನೂನುಗಳನ್ನು "ಅಸಂವಿಧಾನಿಕ ಮತ್ತು ಕಾನೂನು ಬಾಹಿರ" ಎಂದು ಕರೆದಿದ್ದಾರೆ. ರೈತರಿಗೆ ತಮ್ಮ ಅಸೋಸಿಯೇಶನ್ನಿಂದ ಉಚಿತ ಸೇವೆ ನೀಡುವುದಾಗಿ ತಿಳಿಸಿದ್ದಾರೆ. ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿದೆ.
ಇದನ್ನು ಪ್ರತಿಷ್ಠೆಯ ಸಮಸ್ಯೆಯನ್ನಾಗಿ ಮಾಡಬೇಡಿ: ಅಧೀರ್ ರಂಜನ್ ಚೌಧರಿ
ಕೃಷಿ ಕಾನೂನುಗಳನ್ನು ಪ್ರತಿಷ್ಠಿತ ಸಮಸ್ಯೆಯನ್ನಾಗಿ ಮಾಡದೆ ರದ್ದುಪಡಿಸುವಂತೆ ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಧಾನಿಯವರನ್ನು ಕೋರಿದ್ದಾರೆ. ರೈತ ವಿರೋಧಿ ಮತ್ತು ಕಾರ್ಪೋರೇಟ್ ಸ್ನೇಹಿ ಕಾನೂನುಗಳು ಕೊನೆಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಇತರರರಿಂದ ಬೆಂಬಲ (ಸಗಟು ಮಾರುಕಟ್ಟೆ, ಕ್ಯಾಬ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳು, ಅಪ್ಲಿಕೇಶನ್ ಆಧಾರಿತ ಸೇವೆಗಳು, ಬ್ಯಾಂಕ್ ಒಕ್ಕೂಟಗಳು, ವಾಶಿ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ)
ದೆಹಲಿಯಲ್ಲಿ ಹಣ್ಣು-ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ನಮ್ಮ ಹೆಚ್ಚಿನ ವ್ಯಾಪಾರಿಗಳು ಭಾರತ್ ಬಂದ್ ಕರೆಯನ್ನು ಬೆಂಬಲಿಸುತ್ತಿದ್ದಾರೆ. ಘಾಜಿಪುರ, ಓಖ್ಲಾ ಮತ್ತು ನರೇಲಾದಲ್ಲಿ ಬಂದ್ ಪರಿಣಾಮ ಬೀರಬಹುದು ಎಂದು ಏಷ್ಯಾದ ಅತಿದೊಡ್ಡ ಅಜಾದ್ಪುರ ಸಗಟು ಮಾರುಕಟ್ಟೆ ಮಂಡಳಿಯ ಅಧ್ಯಕ್ಷ ಆದಿಲ್ ಅಹ್ಮದ್ ಖಾನ್ ಹೇಳಿದ್ದಾರೆ.
ಅಪ್ಲಿಕೇಶನ್ ಆಧಾರಿತ ಸೇವೆಗಳಾದ ಕ್ಯಾಬ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಬಂದ್ ಬೆಂಬಲಿಸಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿವೆ. ದೆಹಲಿ ಮತ್ತು ತಮಿಳುನಾಡಿನಲ್ಲಿ ಪ್ರಯಾಣಿಕರಿಗೆ ಇದರಿಂದ ಸಮಸ್ಯೆಯಾಗಬಹುದು. ಹಲವಾರು ಬ್ಯಾಂಕ್ ಒಕ್ಕೂಟಗಳು ಭಾರತ್ ಬಂದ್‌ಗೆ ಬೆಂಬಲ ಸೂಚಿಸಿವೆ. ಆದರೆ ಇದರಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.
ಮಹಾರಾಷ್ಟ್ರದಲ್ಲಿ ವಾಶಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಇಂದು ಮುಚ್ಚಿರುತ್ತವೆ. ಇದು ಮುಂಬೈನಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದ ಇತರ ಮಂಡಿಗಳನ್ನು ಸಹ ಮುಚ್ಚಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿರುವ ಪಂಜಾಬ್‌ನಲ್ಲಿ ಬಂದ್ ಹೆಚ್ಚಿನ ಪರಿಣಾಮ ಬೀರಬಹುದು. ಇನ್ನುಳಿದಂತೆ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ ಮತ್ತು ಅಸ್ಸೋಂನಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಇದರಿಂದ ಈ ರಾಜ್ಯಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಸಂಚಾರ ಮಾರ್ಗಸೂಚಿಗಳನ್ನು ನೀಡುವ ಸಾಧ್ಯತೆಯಿದೆ.