ಆಂಧ್ರಪ್ರದೇಶ: ಹಾಸ್ಟೆಲ್ನಿಂದ ಮನೆಗೆ ಹೋಗಲು ಯಾರೋ ತಮ್ಮನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ವಿದ್ಯಾರ್ಥಿನಿಯರು ನಾಟಕವಾಡಿರುವ ಘಟನೆ ಎನ್ಟಿಆರ್ ಜಿಲ್ಲೆಯ ತಿರುವೂರು ಮಂಡಲದ ಮೈಲವರಂನಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ? ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ತಿರುವೂರು ಮಂಡಲದ ಮೂವರು ವಿದ್ಯಾರ್ಥಿನಿಯರಿದ್ದಾರೆ. ರಜೆ ಮೇಲೆ ಮನೆಗೆ ತೆರಳಿದ್ದ ಈ ಮೂವರು (9ನೇ ತರಗತಿ ವಿದ್ಯಾರ್ಥಿನಿಯರು) ಮಂಗಳವಾರ ಮನೆಯಿಂದ ಹಾಸ್ಟೆಲ್‌ಗೆ ವಾಪಸಾಗಿದ್ದರು. ದಿನ ಎಂದಿನಂತೆ ಶಾಂತವಾಗಿ ಕಳೆಯಿತು. ಬುಧವಾರ ಸಂಜೆ ಮೂವರು ಬಾಲಕಿಯರ ಪೈಕಿ ಓರ್ವಳ ಕುತ್ತಿಗೆ ಮತ್ತು ಕೆನ್ನೆಯ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಇದನ್ನು ಸಹ ವಿದ್ಯಾರ್ಥಿನಿಯರು ಗಮನಿಸಿ ತಕ್ಷಣ ಹೋಗಿ ವಾರ್ಡನ್ಗೆ ತಿಳಿಸಿದ್ದಾರೆ. ವಾರ್ಡನ್ ಓಡಿ ಬಂದು ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದಾರೆ. ಏನಾಯಿತು ಎಂದು ಕೇಳಿದಾಗ ಮುಖವಾಡ ಧರಿಸಿದ ಅಪರಿಚಿತ ವ್ಯಕ್ತಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಇದರಿಂದ ಆತಂಕಗೊಂಡ ವಾರ್ಡನ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರನ್ನು ಕಂಡು ಹೆದರಿದ ಬಾಲಕಿ ಹಾಸ್ಟೆಲ್ನಿಂದ ಮನೆಗೆ ಹೋಗಲು ನಾಟಕ ಆಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಬಾಲಕಿಗೆ ಥಳಿಸಿ, ವೈದ್ಯರಿಂದ ಗರ್ಭಪಾತ
ಇದೆಲ್ಲವೂ ಒಂದು ಯೋಜನೆ. ಮೂವರೂ ಸೇರಿ ಹಾಸ್ಟೆಲ್ನಿಂದ ಮನೆಗೆ ಹೋಗಲು ನಾಟಕ ಆಡಿದ್ದೇವೆ ಎಂದು ಬಾಲಕಿ ಸತ್ಯಾಂಶ ತಿಳಿಸಿದ್ದಾಳೆ. ಇದನ್ನು ಕೇಳಿ ಪೊಲೀಸರು ಮತ್ತು ವಾರ್ಡನ್ ಆಶ್ಚರ್ಯಚಕಿತರಾದರು. ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ಮತ್ತೆ ಮನೆಗೆ ಹೋಗಬೇಕೆಂದು ಮೂವರೂ ಸೇರಿ ಈ ಪ್ಲಾನ್ ಮಾಡಿದ್ದು. ಪೆನ್ಸಿಲ್ ಶಾರ್ಪ್ ಮಾಡುವ ಬ್ಲೇಡ್‌ನಿಂದ ಕುತ್ತಿಗೆ ಮತ್ತು ಕೆನ್ನೆಯನ್ನು ಕುಯ್ದುಕೊಂಡಿರುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ.