ಕಾನ್ಪುರ(ಉತ್ತರ ಪ್ರದೇಶ) : ನಗರದ ಹೊರ ವಲಯದ ಘಟಂಪುರದಲ್ಲಿ ಶನಿವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಾದ್ ಪಟ್ಟಣದ ಗೌಶಾಲಾ ಬಳಿ ಚಂದ್ರಿಕಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಹಳ್ಳಕ್ಕೆ ಬಿದ್ದು, 25 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಉನ್ನಾವೊದಲ್ಲಿ ಚಂದ್ರಿಕಾ ದೇವಿ ದರ್ಶನ ಪಡೆದು ಭಕ್ತರು ವಾಪಸ್ ತಮ್ಮ ಸ್ವಗ್ರಾಮ ಕೊರ್ತಾಗೆ ಹೋಗುವಾಗ ದುರಂತ ಸಂಭವಿಸಿದೆ.
ಇದನ್ನೂ ಓದಿ : ರಾಮನಗರ: ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಮಗು ಸಾವು
ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಅಂದಾಜು 50 ಜನರಿದ್ದರು ಎಂದು ಹೇಳಲಾಗುತ್ತಿದೆ. ದೇವಾಸ್ಥಾನದಲ್ಲಿ ಮಗುವಿನ ಜವಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕಾಗಿ ಕುಟುಂಬಸ್ಥರು ಹಾಗೂ ಸಂಬಂಧಿಕರು ದೇವಸ್ಥಾನಕ್ಕೆ ಬಂದು ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಟ್ರ್ಯಾಲಿ ಹಳ್ಳಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
12 ಜನರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ದುರಂತದ ಬಗ್ಗೆ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕಾನ್ಪುರ್ ಟ್ರ್ಯಾಕ್ಟರ್ ಟ್ರ್ಯಾಲಿ ದುರಂತ ತೀವ್ರ ದುಃಖವನ್ನುಂಟು ಮಾಡಿದೆ. ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ. ಗಾಯಾಳುಗಳು ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ. ಸ್ಥಳೀಯ ಆಡಳಿತ ಅಗತ್ಯ ಕೆಲಸ ಮಾಡುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ
ಮೃತರ ಕುಟುಂಬಗಳಿಗೆ ಪರಿಹಾರ: ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ನೀಡುವುದಾಗಿ ಪ್ರಧಾನಿ ಕಚೇರಿ ಘೋಷಿಸಿದೆ. ಹಾಗೆಯೇ ಯುಪಿ ಸರ್ಕಾರ ಕೂಡ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಘೋಷಿಸಿದೆ. ಯುಪಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.