ನಾಂದೇಡ್ (ಮಹಾರಾಷ್ಟ್ರ): ನೆರೆಯ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಕುಟುಂಬದವರ ವಿರೋಧದ ನಡುವೆ ತಮ್ಮದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕೊಲೆ ಮಾಡಲಾಗಿದೆ. ಅಲ್ಲದೇ, ಕುಟುಂಬಸ್ಥರೇ ಈ ವಿದ್ಯಾರ್ಥಿನಿಯ ಹತ್ಯೆ ಮಾಡಿ ನಂತರ ಸಾಕ್ಷ್ಯ ನಾಶಪಡಿಸಲೂ ಯತ್ನಿಸಿದ್ದಾರೆ. ಇದೀಗ ತಂದೆ ಸೇರಿದಂತೆ ಐವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಇಲ್ಲಿನ ಪಿಂಪ್ರಿ ಮಹಿಪಾಲ್ ಗ್ರಾಮದ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿಯನೇ ತನ್ನದೇ ಮನೆಯವರಿಂದ ಕೊಲೆಯಾದ ನತದೃಷ್ಟೆ. ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಎಎಂಎಸ್) ಪದವಿಯ ತೃತೀಯ ವರ್ಷದಲ್ಲಿ ಗೀತಾ ಓದುತ್ತಿದ್ದರು. ಇದರೊಂದಿಗೆ ತಮ್ಮದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರೀತಿಗೆ ವಿರೋಧಿಸಿದ್ದ ಮನೆಯವರು: ಮೆಡಿಸಿನ್ ಪದವಿ ಓದುತ್ತಿದ್ದ ಗೀತಾಳ ಪ್ರೇಮದ ವಿಷಯ ಮನೆಯಲ್ಲಿ ಗೊತ್ತಾಗಿದೆ. ಉನ್ನತ ಶಿಕ್ಷಣದಲ್ಲಿ ಪಡೆಯುತ್ತಿರುವ ಮಗಳು ಗ್ರಾಮದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬುವುದು ತಿಳಿದು ಪೋಷಕರು ಮತ್ತು ಕುಟುಂಬಸ್ಥರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಅಂತೆಯೇ, ಗೀತಾ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಈ ಪ್ರೇಮ ಸಂಬಂಧವನ್ನು ಇಲ್ಲಿಗೆ ಮುರಿದುಕೊಳ್ಳುವಂತೆ ಮಗಳಿಗೆ ಪೋಷಕರು ತಾಕೀತು ಮಾಡಿದ್ದರು ಎಂದು ಹೇಳಲಾಗಿದೆ.
ಬೇರೆ ಯುವಕನ ನೋಡಿದ್ದ ಪೋಷಕರು: ತಮ್ಮದೇ ಗ್ರಾಮದಲ್ಲಿ ಯುವಕನ ಜೊತೆಗಿನ ಪ್ರೀತಿಯನ್ನು ಬಲವಾಗಿ ವಿರೋಧಿಸಿದ್ದ ಗೀತಾ ಪೋಷಕರು, ಕಳೆದ ಮೂರು ತಿಂಗಳ ಹಿಂದೆ ಬೇರೆ ಯುವಕನೊಂದಿಗೆ ಮದುವೆ ಮಾಡಿಕೊಡುವ ನಿರ್ಧಾರಕ್ಕೆ ಬಂದಿದ್ದರು. ಆ ಯುವಕನೊಂದಿಗೆ ಮದುವೆ ಮಾಡಿಕೊಡಲು ಮಾತುಕತೆ ಸಹ ನಡೆಸಿದ್ದರು. ಆದರೆ, ಈ ಮದುವೆಗೆ ಗೀತಾ ಒಪ್ಪಿಕೊಂಡಿರಲಿಲ್ಲ. ಇಷ್ಟೇ ಅಲ್ಲ, ಪೋಷಕರು ನೋಡಿದ ಮದುವೆ ಸಂಬಂಧವನ್ನು ಆಕೆ ಮರಿದು ಹಾಕಿದ್ದಳು ಎನ್ನಲಾಗಿದೆ.
ಮಗಳ ನಿರ್ಧಾರದಿಂದ ಅವಮಾನಿತರಾದ ಪೋಷಕರು: ಮತ್ತೊಂದೆಡೆ, ತಾವು ನೋಡಿದ ಮದುವೆ ಸಂಬಂಧವನ್ನು ಗೀತಾ ಒಪ್ಪಿಕೊಳ್ಳದೇ ಇರುವುದರಿಂದ ಪೋಷಕರು ಅವಮಾನಿತರಂತೆ ಆಗಿದ್ದರು. ತಮ್ಮ ಮಗಳ ನಿರ್ಧಾರದಿಂದ ಸಮಾಜದಲ್ಲಿ ತಲೆ ತಗ್ಗಿಸುವಂತೆ ಆಗಿದೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಹೀಗಾಗಿಯೇ, ಕುಟುಂಬದವರೇ ಆಕೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಭಾನುವಾರದಿಂದ ಕಾಣೆಯಾಗಿದ್ದ ಗೀತಾ: ಇದರ ನಡುವೆ ರವಿವಾರ ಎಂದರೆ ಜನವರಿ 22ರಿಂದ ಗ್ರಾಮದಲ್ಲಿ ಗೀತಾ ಕಾಣಿಸಿಕೊಂಡಿರಲಿಲ್ಲ. ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಗೀತಾ ಗ್ರಾಮದಲ್ಲಿ ಕಾಣದಿರುವುದು ಕೆಲವರ ಗಮನಕ್ಕೂ ಬಂದಿದೆ. ಇದರಿಂದ ಗೀತಾ ನಾಪತ್ತೆಯಾಗಿದ್ದಾಳೆ ಎಂದು ಗ್ರಾಮದಲ್ಲಿ ಗುಸುಗುಸು ಆರಂಭವಾಗಿದೆ. ಇದೇ ವೇಳೆ ಗೀತಾ ನಾಪತ್ತೆಯಾಗಿರುವ ಬಗ್ಗೆ ಗ್ರಾಮದ ಕೆಲವರಿಗೆ ಅನುಮಾನ ಬಂದಿದ್ದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ತನಿಖೆಯಲ್ಲಿ ರಹಸ್ಯ ಬಹಿರಂಗ: ಗೀತಾ ನಾಪತ್ತೆಯಾಗಿದ್ದಾಳೆಂಬ ಮಾಹಿತಿ ಪಡೆದ ಪೊಲೀಸರು, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಈ ತನಿಖೆಯ ಭಾಗವಾಗಿ ಪೋಷಕರನ್ನು ವಿಚಾರಣೆ ನಡೆಸಿದ್ದಾರೆ. ಆಗ ಗೀತಾ ಕೊಲೆಯಾಗಿರುವ ರಹಸ್ಯ ಬಹಿರಂಗವಾಗಿದೆ. ಭಾನುವಾರ ಗೀತಾ ಮನೆಯಲ್ಲಿದ್ದರು. ಈ ವೇಳೆ ಮನೆಯಲ್ಲಿಯೇ ಆಕೆಯನ್ನು ಹತ್ಯೆ ಮಾಡಲಾಗಿದೆ. ನಂತರ ಗ್ರಾಮದ ಹೊಲವೊಂದರಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅದರ ನಂತರ, ಆಕೆಯ ಚಿತಾಭಸ್ಮವನ್ನು ಮತ್ತೊಂದು ಹಳ್ಳಿಗೆ ತೆಗೆದುಕೊಂಡು ಹೋಗಿ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿದೆ ಎಂಬುವುದಾಗಿ ತನಿಖೆಯಲ್ಲಿ ಬಯಲಾಗಿದೆ ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಕಾಂತ್ ಪವಾರ್ ತಿಳಿಸಿದ್ದಾರೆ.
ತಂದೆ ಸೇರಿ ಐವರ ಬಂಧನ: ಸದ್ಯ ಈ ಕೊಲೆ ಪ್ರಕರಣದಲ್ಲಿ ಗೀತಾಳ ತಂದೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕೊಲೆಯಾದ ವಿದ್ಯಾರ್ಥಿನಿಯ ಚಿಕ್ಕಪ್ಪ, ಮಾವ ಮತ್ತು ಇಬ್ಬರು ಸೋದರ ಸಂಬಂಧಿಗಳು ಸಹ ಸೇರಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಚಂದ್ರಕಾಂತ್ ಪವಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆರಿಗೆ ವೇಳೆ ರಕ್ತನಾಳ ಕತ್ತರಿಸಿದ ನಕಲಿ ವೈದ್ಯ: ತಾಯಿ-ಮಗು ದಾರುಣ ಸಾವು