ಜಲಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಸಹೋದರನೊಬ್ಬ ತನ್ನ ಅಕ್ಕನನ್ನು ಕತ್ತು ಹಿಸುಕಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡಿಕ್ಕಿ ಕೊಂದ ಪ್ರಕರಣ ನಡೆದಿದೆ. ಜೋಡಿ ಕೊಲೆ ಮಾಡಿದ ನಂತರ ಆರೋಪಿ ಸಹೋದರ ತನ್ನ ಸ್ವಂತ ಪಿಸ್ತೂಲ್‌ನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ.
ಮೃತರನ್ನು ರಾಕೇಶ್ ಸಂಜಯ್ ರಜಪೂತ್ (22) ಮತ್ತು ವರ್ಷಾ ಸಾಧನ್ ಕೋಲಿ (20) ಎಂದು ಗುರುತಿಸಲಾಗಿದೆ. ಇಬ್ಬರ ಮೃತ ದೇಹಗಳು ಚೋಪ್ಡಾ ನಗರದ ಜುನಾ ವರದ್ ಶಿವರಾದಲ್ಲಿ ಪತ್ತೆಯಾಗಿವೆ.
ಈ ಕೃತ್ಯವನ್ನು ಮೃತ ವರ್ಷಾರ ಸಹೋದರ ಮತ್ತು ಇತರ ಮೂವರು ಸೇರಿಕೊಂಡು ಎಸಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಹೋದರ ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಕೂಡ ಅಪ್ರಾಪ್ತರೇ ಆಗಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಓಡಿ ಹೋಗಲು ಯತ್ನ: ಪರಸ್ಪರ ಪ್ರೀತಿಸುತ್ತಿದ್ದ ವರ್ಷಾ ಮತ್ತು ರಾಕೇಶ್ ಶುಕ್ರವಾರ ರಾತ್ರಿ ಓಡಿ ಹೋಗಿ ಮದುವೆಯಾಗಲು ಪ್ರಯತ್ನಿಸುತ್ತಿದ್ದರು. ಈ ವಿಷಯ ತಿಳಿದ ಸಹೋದರ ಮೊದಲು ರಾಕೇಶ್ಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಂತರ ಸಹೋದರಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಜೋಡಿ ಕೊಲೆ ಪ್ರಕರಣದ ಬಗ್ಗೆ ಚೋಪ್ಡಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದ ಪತಿ.. ಹಾಸನದಲ್ಲಿ ಹರಿದ ನೆತ್ತರು