ಭೋಪಾಲ್(ಮಧ್ಯಪ್ರದೇಶ): ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ತುರ್ತು ಕ್ರಮಗಳನ್ನು ಕೈಗೊಂಡಿರುವುದರಿಂದ ಮಾವೋವಾದಿ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ. ದೇಶದಿಂದ ನಕ್ಸಲ್ವಾದವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
2009ರಲ್ಲಿ ನಕ್ಸಲ್ ಹಿಂಸಾಚಾರ ವಿಪರೀತವಾಗಿತ್ತು. ಆ ವರ್ಷ 2258 ಕಡೆ ಹಿಂಸಾಚಾರ ಸೃಷ್ಟಿಸಿ ಸಾವಿರಾರು ಜನರ ಪ್ರಾಣ ಬಲಿ ಪಡೆದಿದ್ದರು. 2021ರ ಹೊತ್ತಿಗೆ ಇದು 509 ಕ್ಕೆ ಇಳಿದಿದೆ. ಹಲವೆಡೆ ನಡೆದ ಹಿಂಸಾಚಾರದಲ್ಲಿ 147 ಮಂದಿ ಮೃತಪಟ್ಟಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ಬಲಪಡಿಸಿ, ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಿದ ಕಾರಣ ಹಿಂಸಾಚಾರ 3 ಪಟ್ಟು ಕಡಿಮೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೇಂದ್ರ ವಲಯ ಮಂಡಳಿಯ 23 ನೇ ಸಭೆಯಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರ ಕಳೆದ 3 ವರ್ಷಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ಬಲಪಡಿಸಿದೆ. 40 ಹೊಸ ಭದ್ರತಾ ಶಿಬಿರಗಳನ್ನು ತೆರೆಯಲಾಗಿದೆ. ಇನ್ನೂ 15 ಶಿಬಿರಗಳನ್ನು ನಿಯೋಜಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಡಪಂಥೀಯ ಉಗ್ರವಾದ ಸಮಸ್ಯೆ ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ರಾಜ್ಯಗಳ ಸಹಕಾರದಲ್ಲಿ ಇದನ್ನು ಸಾಕಾರ ಮಾಡಲಾಗುವುದು ಎಂದು ಬದ್ಧತೆ ಪ್ರದರ್ಶಿಸಿದರು.
ಸರ್ಕಾರ ಕೈಗೊಂಡ ಕ್ರಮಗಳೇನು?:
- ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂರು ವರ್ಷಗಳಲ್ಲಿ ಸರ್ಕಾರ ಅಂಚೆ ಬ್ಯಾಂಕಿಂಗ್ ಕೇಂದ್ರಗಳೊಂದಿಗೆ 5 ಸಾವಿರ ಅಂಚೆ ಕಚೇರಿಗಳನ್ನು ತೆರೆದಿದೆ.
- ಟೆಲಿಕಾಂ ಸೇವೆಯನ್ನು ವೇಗಗೊಳಿಸಲು ಮೊದಲ ಹಂತದಲ್ಲಿ 2300 ಕ್ಕೂ ಅಧಿಕ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗಿದೆ.
- ಎರಡನೇ ಹಂತದಲ್ಲಿ 2500 ಮೊಬೈಲ್ ಟವರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
- ನಕ್ಸಲ್ ಪಡೆಗಳಿಗೆ ಸೇರುವವರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಅಂತಹವರಿಗೆ ಶಿಕ್ಷಣ, ಅರಿವು ಮೂಡಿಸಲಾಗುತ್ತಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿರುವ ಶ್ರೀಲಂಕಾಗೆ 21 ಸಾವಿರ ಟನ್ ರಾಸಾಯನಿಕ ರಸಗೊಬ್ಬರ ನೀಡಿದ ಭಾರತ