ಪುಲ್ವಾಮಾ (ಜಮ್ಮು-ಕಾಶ್ಮೀರ): 2016ರಲ್ಲಿ ಭದ್ರತಾ ಪಡೆ ಬೇಟೆಯಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಬುರ್ಹಾನ್ ವಾನಿ ಎಂಬ ಉಗ್ರನ ತಂದೆ ಇಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಧ್ವಜಾರೋಹಣ ಮಾಡಿದ್ದಾರೆ.
75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪುಲ್ವಾಮಾದ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುಜಾಫರ್ ವಾನಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಮೃತ ಉಗ್ರನ ತಂದೆ ಧ್ವಜಾರೋಹಣ ಮಾಡಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬುರ್ಹಾನ್ ವಾನಿಯ ಹತ್ಯೆ
2016 ರ ಜುಲೈನಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಮುಜಾಫರ್ ವಾನಿ ಅವರ ಪುತ್ರ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಲಾಗಿತ್ತು. ಈತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದವನಾಗಿದ್ದು, ಇವನ ಸಾವು ಕಾಶ್ಮೀರದಾದ್ಯಂತ ಐದು ತಿಂಗಳುಗಳ ಕಾಲ ಹಿಂಸಾಚಾರ ಭುಗಿಲೇಳಲು ಕಾರಣವಾಗಿತ್ತು. ಈ ಗಲಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.