ಮುಂಬೈ: ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಪತ್ನಿ ನಟಿ ಕ್ರಾಂತಿ ರೆಡ್ಕರ್ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಸುಳ್ಳು ಆರೋಪ ಮಾಡಿ ಟ್ವೀಟ್ ಮಾಡುವುದರಿಂದ ಏನೂ ಆಗುವುದಿಲ್ಲ. ಸಾಕ್ಷ್ಯ ಒದಗಿಸಲಿ ಎಂದು ನಟಿ ಕ್ರಾಂತಿ ರೆಡ್ಕರ್ ಸವಾಲು ಹಾಕಿದ್ದಾರೆ.
ಎಲ್ಲಾ ಆರೋಪಗಳು ಸುಳ್ಳು. ಅವರ ಬಳಿ ಅಂತಹ ಯಾವುದೇ ಪುರಾವೆಗಳಿದ್ದರೆ ಅವರು (ನವಾಬ್ ಮಲಿಕ್) ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆಗ ಮಾತ್ರ ತೀರ್ಪು ನೀಡಲಾಗುವುದು. ಟ್ವಿಟರ್‌ನಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಬರೆಯಬಹುದು ಎಂದು ವ್ಯಂಗ್ಯವಾಡಿದ್ದಾರೆ.
ವಾಂಖೆಡೆ ಫೋನ್ ಟ್ಯಾಪ್ ಮಾಡಿದ್ದಾರೆ ಎಂಬ ನವಾಬ್ ಮಲಿಕ್ ಸಮೀರ್ ಮಾಡಿರುವ ಆರೋಪವನ್ನು ಕ್ರಾಂತಿ ರೆಡ್ಕರ್ ತಳ್ಳಿಹಾಕಿದ್ದಾರೆ. ಹಾಗೆ ಮೊದಲ ಬಾರಿಗೆ ಕ್ರಾಂತಿ ರೆಡ್ಕರ್ ಮಾಧ್ಯಮಗಳೊಂದಿಗೆ ಈ ಸಂಬಂಧ ಮಾತನಾಡಿದ್ದು, ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.
ಇನ್ನು ಸಮೀರ್ ವಾಂಖೆಡೆ ಹಿಂದೂವೋ ಅಥವಾ ಮುಸಲ್ಮಾನನೋ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವಾಗಲೇ ಸಮೀರ್ ಪತ್ನಿ ನಟಿ ಕ್ರಾಂತಿ ರೆಡ್ಕರ್, ಟ್ವಿಟರ್ ನಲ್ಲಿ ತಾವು ಮತ್ತು ಸಮೀರ್ ಇಬ್ಬರೂ ಹಿಂದೂಗಳಾಗಿ ಹುಟ್ಟಿದ್ದೇವೆ ಎಂದಿದ್ದಾರೆ.
ಕ್ರಾಂತಿ ಅವರು ತಮ್ಮ ಟ್ವಿಟರ್‌ನಲ್ಲಿ, ನಾನು ಮತ್ತು ನನ್ನ ಪತಿ ಸಮೀರ್ ಇಬ್ಬರೂ ಹುಟ್ಟಿನಿಂದ ಹಿಂದೂಗಳು. ನಾವು ಮತಾಂತರಗೊಂಡಿಲ್ಲ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಸಮೀರ್ ಅವರ ತಂದೆ ಕೂಡ ಹಿಂದೂ ಆಗಿದ್ದರು ಮತ್ತು ನನ್ನ ಮುಸ್ಲಿಂ ಅತ್ತೆಯನ್ನು ಮದುವೆಯಾಗಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಾಗುತ್ತಿದ್ದ ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ.