ಶಾಮ್ಲಿ(ಉತ್ತರಪ್ರದೇಶ): ಧಾರ್ಮಿಕ ವಿಚಾರಗಳು ಈಗೀಗ ಭಾರಿ ಸದ್ದು ಮಾಡುತ್ತಿವೆ. ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ ವಿಚಾರ, ರಾಜ್ಯದಲ್ಲಿ ಹಿಜಾಬ್ ಧರಿಸುವ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಯಾಗುತ್ತಿವೆ. ಪರ ವಿರೋಧದ ಚರ್ಚೆಗಳು ಜೋರಾಗಿ ನಡೆದಿವೆ.
ಇಂತಹ ಉದ್ವಿಗ್ನ ವಾತಾವರಣ ಕೆಡಿಸುವಂತ ಘಟನೆಗಳ ನಡುವೆ ಅದೇ ಉತ್ತರ ಪ್ರದೇಶದಲ್ಲಿ ಸೌಹಾರ್ದತೆಯ ಘಟನೆಯೊಂದು ಗಮನ ಸೆಳೆಯುವಂತೆ ಮಾಡಿದೆ. ಮುಸ್ಲಿಂ ಜನಸಂಖ್ಯೆಯೇ ಇಲ್ಲದ ಹಳ್ಳಿಯ ಜನರು, ಇಲ್ಲಿನ ಮೊಘಲರಿಗೆ ಸಂಬಂಧಿಸಿದ 300 ವರ್ಷಗಳಿಗೂ ಹೆಚ್ಚು ಹಳೆಯ ಮಸೀದಿಯನ್ನು ಸಂರಕ್ಷಿಸಲು ಮುಂದಾಗಿದ್ದಾರೆ.
ವಿಶೇಷ ಎಂದರೆ ಶಾಮ್ಲಿಯ ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೆ ಈ ಗ್ರಾಮದಲ್ಲಿ ಸಿಥಿಲಗೊಂಡ ಮಸೀದಿಯೊಂದು ಇದ್ದು, ಅದರ ಜೀರ್ಣೋದ್ಧಾರಕ್ಕೆ ಇಲ್ಲಿನ ಜನರು ಮುಂದಾಗಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆಯ ಪಾಠ ಮಾಡಿದ್ದಾರೆ.
ಭವ್ಯ ಇತಿಹಾಸ ಹೊಂದಿರುವ ಗೌಸ್‌ಗಢ: ಶಾಮ್ಲಿ ಜಿಲ್ಲೆಯ ಗೌಸ್‌ಗಢ ಗ್ರಾಮವು ಶ್ರೀಮಂತ ಇತಿಹಾಸ ಹೊಂದಿದೆ. ಮೊಘಲ್ ಆಳ್ವಿಕೆಯಲ್ಲಿ ಅಂದರೆ 1760 ಮತ್ತು 1806 ರ ನಡುವೆ ಈ ಭಾಗದಲ್ಲಿ ಸಮೃದ್ಧ ರಾಜಪ್ರಭುತ್ವವಿತ್ತು. ಸುಮಾರು 300 ವರ್ಷಗಳ ಹಿಂದೆ ಇಲ್ಲಿ ವೈಭವದ ದರ್ಬಾರ್ ಇತ್ತು. ಅದೀಗ ಕೇವಲ ಇತಿಹಾಸವಾಗಿದ್ದು, ಶಿಥಿಲಗೊಂಡ ಮಸೀದಿ ಆಗಿನ ರಾಜವೈಭವವನ್ನು ನೆನಪು ಮಾಡುತ್ತಿದೆ. ಗ್ರಾಮದಲ್ಲಿ ಮುಸ್ಲಿಮರಿಲ್ಲದ ಕಾರಣ 1940 ರಿಂದ ಈ ಮಸೀದಿಯಲ್ಲಿ ಅಜಾನ್, ನಮಾಜ್, ದುವಾ ನಡೆಯುತ್ತಿಲ್ಲ. ಈಗ ಹಳೆಯದಾದ ಈ ಕಟ್ಟಡವನ್ನು ಪುನರುಜ್ಜೀವನಗೊಳಿಸಲು ಈ ಗ್ರಾಮದ ಹಿಂದೂಗಳು ಮುಂದಾಗಿದ್ದಾರೆ.
ಪ್ರವಾಸಿ ತಾಣವಾಗಿಸಲು ಆಗ್ರಹ: ಸಮಾಜ ಸೇವಕ ಚೌಧರಿ ನೀರಜ್ ರೋಡ್ ನೇತೃತ್ವದಲ್ಲಿ ಗೌಸಗಢ ಗ್ರಾಮದಲ್ಲಿ ಇರುವ ಮಸೀದಿಯನ್ನು ಸಂರಕ್ಷಿಸುವ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಈ ಮಸೀದಿಯನ್ನು ರಕ್ಷಿಸುವ ಅಗತ್ಯವಿದೆ ಎಂದು ಗ್ರಾಮ ಪಂಚಾಯಿತಿಯ 13 ಸದಸ್ಯರು ಒಮ್ಮತದಿಂದ ನಿರ್ಣಯ ಕೈಗೊಂಡಿದ್ದಾರೆ. ಸಮಾಜ ಸೇವಕ ನೀರಜ್ ರೋಡೆ ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಸೀದಿ ಜೀರ್ಣೋದ್ಧಾರದ ಬಗ್ಗೆ ಮಾತನಾಡಿರುವ ರೋಡೆ, ಈ ಪ್ರದೇಶದ ಮಹತ್ವವನ್ನು ತೋರಿಸುವ ಏಕೈಕ ಪರಂಪರೆಯಾಗಿ ಈ ಮಸೀದಿ ಉಳಿದಿದೆ. ಈ ಸ್ಥಳದಲ್ಲಿರುವ ಮಸೀದಿಯನ್ನು ನೋಡಲು ವಿವಿಧ ಗ್ರಾಮಗಳು ಮತ್ತು ಜಿಲ್ಲೆಗಳಿಂದ ಅನೇಕ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಇದನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಾವು ಶ್ರಮಿಸುತ್ತಿದ್ದೇವೆ. ಮಸೀದಿ ಸಂಕೀರ್ಣವು 3.5 ಬಿಘಾಗಳಲ್ಲಿ ಹರಡಿದೆ. ಆದರೆ, ಬಹುತೇಕ ಖಾಲಿ ಭೂಮಿಯನ್ನು ಅತಿಕ್ರಮಿಸಲಾಗಿದೆ. ಇದನ್ನು ತೆರವುಗೊಳಿಸಲು ಇಲ್ಲಿನ ಜನರು ಒಪ್ಪಿಕೊಂಡಿದ್ದಾರೆ ಎಂದು ರೋಡೆ ಹೇಳಿದ್ದಾರೆ.
ರೈತರ ಒಪ್ಪಿಗೆ: ಈ ಐತಿಹಾಸಿಕ ಮಸೀದಿ ಸಮೀಪವೇ ಗ್ರಾಮದ ರೈತ ಸಂಜಯ ಚೌಧರಿ ಅವರ ಹೊಲ ಇದೆ. ಮಸೀದಿಯ ಯಾವುದೇ ಜಮೀನು ರೈತರು ವಶದಲ್ಲಿದ್ದರೆ, ಮಾತುಕತೆ ನಡೆಸಲು ಅವರು ಸಿದ್ಧರಿದ್ದಾರೆ. ಈ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಈ ಮಸೀದಿ ದೇಶದ ಕೋಮು ಸೌಹಾರ್ದತೆಗೆ ಉದಾಹರಣೆಯಾಗಬಲ್ಲದು ಎಂದು ಆ ರೈತ ಹೇಳಿಕೊಂಡಿದ್ದಾರೆ.
ಇದಕ್ಕೆ ಸರ್ಕಾರವೂ ನೀಡಬೇಕಿದೆ ಸಹಕಾರ: ಗ್ರಾಮ ಪಂಚಾಯಿತಿ ಸದಸ್ಯ ಶಿವಲಾಲ್ ಮಾತನಾಡಿ, ಈ ಸ್ಥಳದಲ್ಲಿ ಧೂಳು, ಮಣ್ಣು ಸೇರಿಕೊಂಡಿದೆ. ಈ ಭಾಗದಲ್ಲಿ ಸ್ವಚ್ಛತೆ ಕಾಪಾಡಲು 50-60 ಗ್ರಾಮಸ್ಥರ ತಂಡವನ್ನು ರಚಿಸಲಾಗಿದೆ. ಈ ಭಾಗದಲ್ಲಿರುವ ಮಸೀದಿಯನ್ನು ನೋಡಲು ಅನೇಕ ಮುಸ್ಲಿಮರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಪರಂಪರೆಯ ರಕ್ಷಣೆ ಬಹಳ ಮುಖ್ಯ. ಈ ಕಾರ್ಯಕ್ಕೆ ಸರಕಾರದಿಂದ ನೆರವು ಸಿಗಲಿದೆ ಎಂಬ ಭರವಸೆ ಇದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತಿಹಾಸ ಅದ್ಭುತ: 1788ರಲ್ಲಿ ಸುಮಾರು ಎರಡೂವರೆ ತಿಂಗಳ ಕಾಲ ಮೊಘಲ್ ದೊರೆ ಷಾ ಆಲಂನನ್ನು ಪದಚ್ಯುತಗೊಳಿಸಿ ದೆಹಲಿಯ ಸಿಂಹಾಸನವನ್ನು ವಶಪಡಿಸಿಕೊಂಡ ಅಂದಿನ ರಾಜಪ್ರಭುತ್ವ ಮತ್ತು ಗುಲಾಮ್ ಖಾದಿರ್ ಅವರ ಅರಮನೆಯೊಳಗೆ ಈ ಮಸೀದಿ ನಿರ್ಮಿಸಲಾಗಿದೆ. ಕಾಲಾನಂತರದಲ್ಲಿ ಅರಮನೆ ಅಸ್ತಿತ್ವದಲ್ಲಿಲ್ಲ. ಆದರೆ ಮಸೀದಿಯ ಅವಶೇಷಗಳು ಮಾತ್ರ ಉಳಿದಿವೆ. ಇತಿಹಾಸಕಾರರ ಪ್ರಕಾರ, ಗುಲಾಮ್ ನಜೀಬ್-ಉದ್-ದೌಲಾ ಅವರ ಮೊಮ್ಮಗ ಖಾದಿರಂಜಿಬಾಬಾದ್ (ಬಿಜ್ನೋರ್‌ನಲ್ಲಿ) ಇಲ್ಲಿ ಮಸೀದಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ದೆಹಲಿಯ ಮುತ್ತಿಗೆ ಮತ್ತು ಲೂಟಿಯ ಸಮಯದಲ್ಲಿ ಗುಲಾಮ್ ಖಾದಿರ್ ಮೊಘಲ್ ಚಕ್ರವರ್ತಿ ಷಾ ಆಲಂ II ನನ್ನು ಚಿತ್ರಹಿಂಸೆ ನೀಡಿ ಕುರುಡನನ್ನಾಗಿ ಮಾಡಿದನೆಂದು ಇತಿಹಾಸ ಕಾರರು ಹೇಳುತ್ತಿದ್ದಾರೆ.
ಇದನ್ನು ಓದಿ;ಕೇದಾರನಾಥದ ರಣಭಯಂಕರ ಪ್ರವಾಹಕ್ಕೆ 9 ವರ್ಷ.. ಇಲ್ಲಿದೆ ಕರಾಳ ದಿನಗಳ ನೆನಪು