ಅರಿಯಲೂರ್(ತಮಿಳುನಾಡು): ಸುಮಾರು ನಾಲ್ಕು ದಶಕಗಳಿಂದ ಒಟ್ಟಿಗಿದ್ದು ಕುಚ್ಚಿಕೋ ಗೆಳೆಯರಾಗಿದ್ದ ಹಿಂದೂ -ಮುಸ್ಲಿಂ ಧರ್ಮೀಯ ವ್ಯಕ್ತಿಗಳಿಬ್ಬರು ಒಂದೇ ದಿನ, ಕೇವಲ 30 ನಿಮಿಷಗಳ ಅಂತರದಲ್ಲೇ ಇಹಲೋಕ ತ್ಯಜಿಸಿರುವ ಘಟನೆ ಅರಿಯಲೂರಿನಲ್ಲಿ ನಡೆದಿದೆ.
ಮಹಾಲಿಂಗಂ ಮತ್ತು ಪಿ.ಜೈಲಾಬುದೀನ್ ಅರಿಯಲೂರಿನ ಜಯಂಕೊಂಡಂ ಪಟ್ಟಣದ ನಿವಾಸಿಗಳು. ಮಹಾಲಿಂಗಂ ಮರಿಯಮ್ಮನ್ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇವರು ದೇವಾಲಯದ ಬಳಿ ಚಹಾ ಅಂಗಡಿಯನ್ನೂ ನಡೆಸುತ್ತಿದ್ದರು. ಜೈಲಬುದ್ದೀನ್ ಅವರು ಮಹಾಲಿಂಗಂ ಮನೆಯ ಎದುರು ವಾಸವಾಗಿದ್ದು, ಅಕ್ಕಿ ಗಿರಣಿ ಮಾಲೀಕರಾಗಿದ್ದರು.
ಸುಮಾರು 40 ವರ್ಷಗಳಿಂದ ಒಟ್ಟಿಗಿದ್ದ ಇವರಿಬ್ಬರ ಸ್ನೇಹ ಜಾತಿ, ಧರ್ಮ ಮೀರಿ ಬೆಳೆದಿತ್ತು. ಹಬ್ಬ-ಹರಿ ದಿನಗಳಲ್ಲಿ ಎರಡೂ ಕುಟುಂಬಗಳ ಸದಸ್ಯರು ಭಾಗಿಯಾಗಿ ಸಂಭ್ರಮಿಸುತ್ತಿದ್ದರು. ಯಾವುದೇ ಜಾತಿ ಭೇದ ಭಾವ ಅಲ್ಲಿ ಸುಳಿಯುತ್ತಿರಲಿಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಉಭಯ ಕುಟುಂಬಗಳು ಒಂದೇ ಮನೆಯವರಂತೆ ಇರುತ್ತಿದ್ದರು.
ಈ ನಡುವೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಮಹಾಲಿಂಗಂ ಅವರನ್ನು ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೂ ಮೊದಲೇ ವಯೋಸಹಜ ಖಾಯಿಲೆಗಳಿಂದ ಜೈಲಾಬುದ್ದೀನ್ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವಿಷಯ ತಿಳಿದು ಕುಟುಂಬ ಸದಸ್ಯರು ಇಬ್ಬರನ್ನೂ ಒಂದೇ ವಾರ್ಡಿನಲ್ಲಿ ದಾಖಲಿಸಿದ್ದರು.
ಇದನ್ನೂ ಓದಿ: ಏರ್‌ಏಷ್ಯಾ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಇಟಾಲಿಯನ್ ಸ್ಮೂಚ್ ಕೇಳಿ ಬೆತ್ತಲಾದ ಪ್ರಯಾಣಿಕ!
ಈ ವೇಳೆ ತೀವ್ರ ಎದೆನೋವಿನಿಂದ ಜೈಲಾಬುದ್ದೀನ್ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ನಿಧನರಾದರು. ಪ್ರಾಣ ಸ್ನೇಹಿತನ ಅಗಲುವಿಕೆಯ ಸುದ್ದಿ ಕೇಳಿ ಆಘಾತಗೊಂಡ ಮಹಾಲಿಂಗಂ, ಅರ್ಧ ಗಂಟೆ (30 ನಿಮಿಷಗಳು) ಬಳಿಕ ಕೊನೆಯುಸಿರೆಳೆದರು.
ಹೀಗೆ ಸಾವಿನಲ್ಲೂ ಒಂದಾದ ಪ್ರಾಣ ಸ್ನೇಹಿತರ ಸ್ನೇಹವನ್ನು ಚಿರಸ್ಥಾಯಿಗೊಳಿಸಲು ಕುಟುಂಬಸ್ಥರು ಒಂದೇ ಬ್ಯಾನರ್ನಲ್ಲಿ ಇಬ್ಬರ ಭಾವಚಿತ್ರವನ್ನು ಹಾಕಿ ಗೌರವ ಸಲ್ಲಿಸಿದ್ದಾರೆ.