ಅಲಿಗಢ್(ಉತ್ತರ ಪ್ರದೇಶ) : ಜಿಲ್ಲೆಯ ತಪ್ಪಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ವಲಸೆ ಹೋಗಲು ತಯಾರಿ ನಡೆಸುತ್ತಿರುವ ಹಿಂದೂ ಕುಟುಂಬಗಳನ್ನ ಸೋಮವಾರ ಬಿಜೆಪಿ ನಿಯೋಗ ಭೇಟಿ ಮಾಡಿತು. ಎಲ್ಲ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿತು.
ಮೇ 26 ರ ಮಧ್ಯಾಹ್ನ ನೂರ್ಪುರ್ ಗ್ರಾಮದ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಇಬ್ಬರು ಹೆಣ್ಣುಮಕ್ಕಳ ಮದುವೆ ಮೆರವಣಿಗೆಯನ್ನು ನಿಲ್ಲಿಸಿದ್ದಕ್ಕಾಗಿ ನಿರ್ದಿಷ್ಟ ಸಮುದಾಯದ ಜನರ ಮೇಲೆ ಕೋಪಗೊಂಡ ಸುಮಾರು 125 ಹಿಂದೂ ಕುಟುಂಬಗಳು ಕಳೆದ ಭಾನುವಾರ 'ಈ ಮನೆ ಮಾರಾಟಕ್ಕಿದೆ' ಎಂದು ಬರೆದು ತಮ್ಮ ಮನೆ ಬಾಗಿಲಿಗೆ ಅಂಟಿಸಿ , ವಲಸೆ ಹೋಗಲು ತಯಾರಿ ನಡೆಸಿದ್ದವು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಪೊಲೀಸರು ಮಧ್ಯಪ್ರವೇಶಿಸಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ 11 ಜನರ ಮೇಲೆ ಕೇಸ್ ಹಾಕಿ ವರದಿ ಸಲ್ಲಿಸಲಾಯ್ತು. ಈ ಹಿನ್ನೆಲೆ ಬಿಜೆಪಿ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ, ನಿರ್ದಿಷ್ಟ ಸಮುದಾಯದ ಅಪರಾಧಿಗಳ ವಿರುದ್ಧ ಸರಿಯಾದ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಅಪರಾಧಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಸಂತ್ರಸ್ತರ ಕುಟುಂಬಗಳು ಆಗ್ರಹಿಸಿವೆ.
ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಬಂದ ಬಿಜೆಪಿ ಸಂಸದ ಸತೀಶ್ ಗೌತಮ್ ಮಾತನಾಡಿ, ಬಿಜೆಪಿ ನಿಯೋಗವು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದೆ ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದೆ ಎಂದು ಹೇಳಿದರು. ಪ್ರಕರಣದ ಅಪರಾಧಿಗಳನ್ನು ಜೈಲಿಗೆ ಕಳುಹಿಸಲು ಪೊಲೀಸರು 11 ಜನರ ವಿರುದ್ಧ ವರದಿ ದಾಖಲಿಸಿದ್ದಾರೆ. ಇನ್ನುಂದೆ ಈ ಹಳ್ಳಿಯಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಹೇಳಿದರು.