ಅಸ್ಸೋಂ: ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸರ್ಕಾರ ಸಾಲ ಪಡೆಯುವಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ಮಾಡಿದೆ. ಸರ್ಕಾರ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಸಾಲ ಪಡೆಯಲಾರಂಭಿಸಿದೆ. ಮಂಗಳವಾರ ರಾಜ್ಯ ಸರಕಾರ ರಿಸರ್ವ್ ಬ್ಯಾಂಕ್ ಮೂಲಕ 1000 ಕೋಟಿ ರೂ. ಸಾಲ ಪಡೆದಿದ್ದು ಇದನ್ನು ಹಿಂದಿರುಗಿಸಲು ಹತ್ತು ವರ್ಷಗಳ ಕಾಲ ಸಮಯ ತೆಗೆದುಕೊಂಡಿದೆ.
ಸಾಲದ ಬಡ್ಡಿ ದರ ಶೇ.7.58ರಷ್ಟು ಇರಲಿದೆ. ವಿವಿಧ ಫಲಾನುಭವಿ - ಉತ್ಪಾದಿತ ಯೋಜನೆಗಳನ್ನು ಅಳವಡಿಸಿ ಕೊಂಡಿರುವುದರಿಂದ ರಾಜ್ಯದ ಸಾಲದ ಮೊತ್ತ ಪ್ರತಿ ವರ್ಷವೂ ಹೆಚ್ಚುತ್ತಿದೆ. ಇದರ ಮಧ್ಯೆ ಸರ್ಕಾರ ಒಂದೇ ಸ್ಥಳದಲ್ಲಿ ಅಸ್ಸೋಂನ ಸಾಂಪ್ರದಾಯಿಕ ಬಿಹು ನೃತ್ಯವನ್ನು ಪ್ರದರ್ಶಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಲು ಆಯೋಜನೆ ಮಾಡಿದ್ದು ಇದಕ್ಕೆ ನೂರು ಕೋಟಿಗೂ ಹೆಚ್ಚೀನ ಹಣ ವ್ಯಯಿಸಿದೆ ಎಂಬುದನ್ನು ಗಮನಿಸಬೇಕಾದ ಅಂಶ. ಏತನ್ಮಧ್ಯೆ, ಸಾಲದ ಮೊತ್ತ ಹೆಚ್ಚಳದಿಂದಾಗಿ, ಬಡ್ಡಿದರವೂ ಹೆಚ್ಚಾಗಿದೆ.
ಬಡ್ಡಿಯಾಗಿ 7000 ಕೋಟಿ ಪಾವತಿ: ಇತ್ತೀಚೆಗೆ ರಾಜ್ಯ ಸರ್ಕಾರ ವಾರ್ಷಿಕ ಬಡ್ಡಿ ಹೆಸರಲ್ಲಿ ಸರಿಸುಮಾರು 7,000 ಕೋಟಿ ರೂ. ಹಣ ಪಾವತಿಸಿದೆ. ಅಂಕಿ- ಅಂಶಗಳ ಪ್ರಕಾರ ರಾಜ್ಯ ಬಿಜೆಪಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಬಡ್ಡಿಯಾಗಿ ಒಟ್ಟು 34,274.59 ಕೋಟಿ ರೂ. ಪಾವತಿಸಿದೆ. ರಾಜ್ಯದಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದ ದಿವಂಗತ ತರುಣ್ ಗೊಗೊಯ್ ನೇತೃತ್ವದ ಸರ್ಕಾರವು ಒಟ್ಟು 35,690 ಕೋಟಿ ರೂ. ಸಾಲದ ಹೊರೆಯನ್ನು ರಾಜ್ಯದ ಮೇಲೆ ಬಿಟ್ಟಿತ್ತು. ಬಳಿಕ 2016ರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ನಂತರ ಈ ಸಾಲದ ಹೊರೆ 1.32 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ರಾಜ್ಯ ಸರ್ಕಾರ ಪ್ರತಿ ವರ್ಷ ತೆಗೆದುಕೊಂಡಿರುವ ಸಾಲದ ಪ್ರಮಾಣ ಹೆಚ್ಚಾಗಲು ಫಲಾನುಭವಿ ಯೋಜನೆಗಳೇ ಪ್ರಾಥಮಿಕ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಸಾಲ ಪಡೆದಿದೆ ಆದರೆ ಈ ಹಣವನ್ನು ಚುನಾವಣಾ ಉದ್ದೇಶಕ್ಕಾಗಿ ಫಲಾನುಭವಿಗಳ ಯೋಜನೆಗಳನ್ನು ಜಾರಿಗೆ ತರಲು ಖರ್ಚು ಮಾಡುತ್ತಿದೆ. ಇದರಿಂದ ರಾಜ್ಯ ಸಮಗ್ರ ಅಭಿವೃದ್ಧಿ ಕಂಡಿಲ್ಲ ಎಂದು ವರದಿಯಾಗಿದೆ.
ಏತನ್ಮಧ್ಯೆ, ವೆಚ್ಚವನ್ನು ಕಡಿತಗೊಳಿಸುವುದರ ವಿರುದ್ಧವಾಗಿ ಸರ್ಕಾರವು ಬಾಹ್ಯ ಅಂಶಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಂಡವಾಳವನ್ನು ವ್ಯಯಿಸುತ್ತಿದೆ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ 2021-2022 ರ ಆರ್ಥಿಕ ವರ್ಷದ ಲೆಕ್ಕಪರಿಶೋಧನಾ ವರದಿಯಲ್ಲಿ ರಾಜ್ಯದ ಸಾಲದ ಹೊರೆಯ ಬಗ್ಗೆಯೂ ಉಲ್ಲೇಖಿಸಿರುವುದನ್ನು ಗಮನಿಸಬಹುದು. ಸಾರ್ವಜನಿಕ ಸಾಲದ ಮೇಲಿನ ಬಂಡವಾಳ ಕಡಿತವಾಗಲಿದ್ದು, ಮುಂದಿನ ವರ್ಷಗಳಲ್ಲಿ ಬಡ್ಡಿ ಪಾವತಿಯ ಮೇಲಿನ ಒತ್ತಡ ಹೆಚ್ಚಾಗಲಿದೆ ಎಂದು ಸಿಎಜಿ ವರದಿ ಮಾಡಿದೆ.
ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ಹೊರೆಯನ್ನು ತಪ್ಪಿಸಲು ಹಾಗು ಆದಾಯವನ್ನು ಹೆಚ್ಚಿಸಲು ಮತ್ತು ಆದಾಯ ವೆಚ್ಚವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಜಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಆದರೆ ಸರ್ಕಾರವು ವೆಚ್ಚವನ್ನು ನಿಯಂತ್ರಿಸುವ ಬದಲು ಖರ್ಚನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಇದರಿಂದಾಗಿ ರಾಜ್ಯದ ಸಾಲದ ಹೊರೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸಿಎಜಿ ವರದಿ ಮಾಡಿದೆ.
ಇನ್ನು ಇಂದು ಅಸ್ಸೋಂಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ರಾಜ್ಯದಲ್ಲಿ 14000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿಲಿದ್ದಾರೆ. ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. , ಸರುಸಜೈ ಕ್ರೀಡಾಂಗಣದಲ್ಲಿ 11,000 ಕ್ಕೂ ಹೆಚ್ಚು ಬಿಹುವ- ಬಿಹುವತಿಗಳು ಅತಿದೊಡ್ಡ ನೃತ್ಯ ಸಂಯೋಜಿಸಲಿದ್ದಾರೆ. ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿನ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಹೆಲಿಕಾಪ್ಟರ್ ಮೂಲಕ ಗುವಾಹಟಿಗೆ ಆಗಮಿಸಿ ಚಾಂಗ್ಸಾರಿಯ ಏಮ್ಸ್ ಕಾರ್ಯಕ್ರಮದಲ್ಲಿ ಭಾವಹಿಸಲಿದ್ದಾರೆ. 1123 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 750 ಹಾಸಿಗೆಗಳ ಏಮ್ಸ್ ಅನ್ನು ಪ್ರಧಾನಿ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಜನ್ಮದಿನ.. ಹೈದರಾಬಾದ್‌ನಲ್ಲಿ 'ಸಂವಿಧಾನ ಶಿಲ್ಪಿ'ಯ 125 ಅಡಿ ಎತ್ತರದ ಪ್ರತಿಮೆ ಅನಾವರಣ