ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ಸಮಯ ಬಾಕಿ ಇರುವಾಗ ಆಡಳಿತಾರೂಢ ಬಿಜೆಪಿ ತನ್ನ ಐವರು ಬಂಡಾಯ ನಾಯಕರನ್ನು, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕಾಗಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಮಾಜಿ ಶಾಸಕರಾದ ತೇಜ್ವಂತ್ ಸಿಂಗ್ ನೇಗಿ (ಕಿನ್ನೌರ್), ಕಿಶೋರಿ ಲಾಲ್ (ಅನ್ನಿ), ಮನೋಹರ್ ಧಿಮಾನ್ (ಇಂದೋರಾ), ಕೆ ಎಲ್ ಠಾಕೂರ್ (ನಲಗಢ) ಮತ್ತು ಪಕ್ಷದ ಉಪಾಧ್ಯಕ್ಷ ಕೃಪಾಲ್ ಪರ್ಮಾರ್ ಅಮಾನತು ಶಿಕ್ಷೆಗೆ ಒಳಗಾದವರು. ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಎಲ್ಲ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಂದ ಪಕ್ಷೇತರರಾಗಿ ಚುನಾವಣೆಯ ಅಖಾಡಕ್ಕಿಳಿಯಲು ನಿರ್ಧರಿಸಿದ್ದರು.
ಮಾಜಿ ರಾಜ್ಯಸಭಾ ಸಂಸದ ಪರ್ಮಾರ್ ಅವರು ಫತೇಪುರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ತೊಡೆ ತಟ್ಟಿದ್ದಕ್ಕಾಗಿ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ ಕಶ್ಯಪ್ ಅವರು, ಆರು ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಿದ್ದಾರೆ.
ನವೆಂಬರ್ 12 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಟಿಕೆಟ್ ಕೈ ತಪ್ಪಿದ 10ಕ್ಕೂ ಹೆಚ್ಚು ಮಂದಿ ಸ್ವತಂತ್ರ್ಯವಾಗಿ ಕಣಕ್ಕಿಳಿದಿದ್ದರು. ಬಿಜೆಪಿ ವರಿಷ್ಠರು ಮಧ್ಯಪ್ರವೇಶಿಸಿದ ನಂತರ ಮಾಜಿ ಸಂಸದ ಮಹೇಶ್ವರ್ ಸಿಂಗ್, ಯುವರಾಜ್ ಕಪೂರ್ ಮತ್ತು ಧರ್ಮಶಾಲಾ ಬ್ಲಾಕ್ ಅಧ್ಯಕ್ಷ ಅನಿಲ್ ಚೌಧರಿ ಸೇರಿದಂತೆ ಕೆಲವು ಮುಖಂಡರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದರು.
ಇದನ್ನೂ ಓದಿ: ಹಿಮಾಚಲ ಚುನಾವಣೆ ಟಿಕೆಟ್ ಹಂಚಿಕೆ: ವಂಶಪಾರಂಪರ್ಯ ರಾಜಕಾರಣಕ್ಕೆ ಬಿಜೆಪಿ ಮಣೆ