ನವದೆಹಲಿ: ಮಾರ್ಚ್ 9 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಹಿಜಾಬ್ ಧರಿಸಿ ಸರ್ಕಾರಿ ಸಂಸ್ಥೆಗಳಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಕರ್ನಾಟಕದ ವಿದ್ಯಾರ್ಥಿನಿಯರ ಗುಂಪೊಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತುರ್ತು ವಿಚಾರಣೆಗಾಗಿ ಪಟ್ಟಿ ಮಾಡಲು ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ವಕೀಲ ಶಾದನ್ ಫರಾಸತ್ ವಿಷಯ ಪ್ರಸ್ತಾಪಿಸಿದರು. ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಹುಡುಗಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪೀಠದ ಗಮನಕ್ಕೆ ತಂದರು. ವಿದ್ಯಾರ್ಥಿನಿಯರು ಈಗಾಗಲೇ ಒಂದು ವರ್ಷ ಕಳೆದಿದ್ದಾರೆ. ಮುಂಬರುವ ದಿನಗಳಲ್ಲಿ ಅಂದರೆ ಮಾರ್ಚ್ 9 ರಿಂದ ಪರೀಕ್ಷೆಗಳು ಆರಂಭವಾಗಲಿವೆ, ಹೀಗಾಗಿ ನಮ್ಮ ಅರ್ಜಿಯನ್ನು ಶೀಘ್ರವಾಗಿ ಪರಿಗಣಿಸಬೇಕು ಎಂದು ಫರಾಸತ್ ನ್ಯಾಯಾಲಯಕ್ಕೆ ತಿಳಿಸಿದರು.
ಫರಾಸತ್ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಈ ಬಗ್ಗೆ ತಾವು ಗಮನಿಸುವುದಾಗಿ ಹೇಳಿದರು. ಈ ಪ್ರಕರಣದ ವಿಚಾರಣೆ ನಡೆಸುವಂತೆ, ಈ ಹಿಂದೆ ಹಿರಿಯ ವಕೀಲ ಮೀನಾಕ್ಷಿ ಅರೋರಾ ಅವರು ಜನವರಿ 23 ರಂದು ಪ್ರಸ್ತಾಪಿಸಿದ್ದರು. ಈಗಾಗಲೇ ಶಾಲಾ- ಕಾಲೇಜುಗಳಲ್ಲಿ ಪರೀಕ್ಷೆಗೆ ಅಣಿ ಮಾಡಿಕೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕಿರುವುದರಿಂದ ಅರ್ಜಿಯ ತುರ್ತು ವಿಚಾರಣೆ ಅಗತ್ಯ ಇದೆ ಎಂದು ವಿದ್ಯಾರ್ಥಿನಿಯರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ವಿಷಯದಲ್ಲಿ ಮಧ್ಯಂತರ ನಿರ್ದೇಶನಗಳ ಅಗತ್ಯವಿದ್ದು, ತುರ್ತು ಆದೇಶದ ಅಗತ್ಯವೂ ಇದೆ. ನೀವು ವಿಚಾರಣೆ ನಡೆಸಿ ಆದೇಶ ನೀಡಿದರೆ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬಹುದು ಎಂದು ಕೋರ್ಟ್ಗೆ ವಕೀಲರು ಮನವಿ ಮಾಡಿದ್ದರು.
ಜನವರಿ 23 ರ ಪ್ರಸ್ತಾಪದ ವೇಳೆ, ತ್ರಿಸದಸ್ಯ ಪೀಠ ಶೀಘ್ರದಲ್ಲೇ ವಿಚಾರಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಭರವಸೆ ನೀಡಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠವು, ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಧಿಕಾರ ಇದೆ ಎಂದು ವಿಭಜಿತ ತೀರ್ಪು ನೀಡಿತ್ತು.
ಇದಕ್ಕೂ ಮೊದಲು ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡಸಿದ್ದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ನಿಷೇಧ ಆದೇಶವನ್ನು ಎತ್ತಿಹಿಡಿದಿತ್ತು. ಶಾಲಾ ಕಾಲೇಜು ತರಗತಿಗಳಲ್ಲಿ ಹಿಜಾಬ್ ನಿಷೇಧ ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ಆದೇಶದ ಬೆನ್ನಲ್ಲೇ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನಿಷೇಧವನ್ನು ಎತ್ತಿಹಿಡಿದಿದ್ದರು. ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅದನ್ನು ರದ್ದುಗೊಳಿಸಿದರು. ಹೀಗಾಗಿ ಈ ವಿಚಾರ ಬಹು ಪೀಠದಿಂದ ವಿಚಾರಣೆ ನಡೆಸಬೇಕಾದ ಅಗತ್ಯತೆ ಬಿದ್ದಿತ್ತು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ವಿಭಜಿತ ತೀರ್ಪಿನ ನಂತರ ಸಂತ್ರಸ್ತ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಂದ ಖಾಸಗಿ ಕಾಲೇಜುಗಳಿಗೆ ವರ್ಗಾವಣೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಸ್ತೃತ ಪೀಠದಿಂದ ವಿಚಾರಣೆ ನಡೆಸಿ, ಶೀಘ್ರ ನ್ಯಾಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮುಂದೆ ತಮ್ಮ ವಾದ ಮಂಡಿಸಿದ್ದಾರೆ.
ಇದನ್ನು ಓದಿ: ಹಿಜಾಬ್ ವಿಚಾರ ಸೆನ್ಸೇಷನ್ ಮಾಡಬೇಡಿ: ಶೀಘ್ರ ವಿಚಾರಣೆಗೆ ಸುಪ್ರೀಂ ನಕಾರ