ಪಾಟ್ನಾ(ಬಿಹಾರ): ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ನಿತೀಶ್ ಕುಮಾರ್, 'ಹಿಜಾಬ್ ನಮಗೆ ಸಮಸ್ಯೆ ಅಲ್ಲ, ನಮ್ಮ ರಾಜ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ' ಎಂದು ಹೇಳಿದ್ದಾರೆ.
'ರಾಜ್ಯದ ಶಾಲೆಗಳಲ್ಲಿ ಮಕ್ಕಳು ಬಹುತೇಕ ಒಂದೇ ರೀತಿಯ ಉಡುಗೆ ಧರಿಸುತ್ತಾರೆ. ನಾವು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಯಾರಾದರೂ ತಲೆಗೆ ಏನಾದರೂ ಹಾಕಿಕೊಂಡರೆ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಅವರ ಧರ್ಮ ಅಥವಾ ಸಂಸ್ಕೃತಿಯ ಆಚರಣೆಯಲ್ಲಿ ನಾವು ಹಸ್ತಕ್ಷೇಪ ಮಾಡಲಾರೆವು. ಆದ್ದರಿಂದಲೇ ಇಂತಹ ವಿಷಯಗಳತ್ತ ನಾವು ಗಮನಹರಿಸಬಾರದು. ಇದು ನಿಷ್ಪ್ರಯೋಜಕ' ಎಂದು ಅವರು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದರೊಂದಿಗೆ ಉಡುಪಿಯಲ್ಲಿ ಆರಂಭವಾದ ಈ ಸಂಘರ್ಷ ಕ್ರಮೇಣ ರಾಜ್ಯದ ಇತರ ಭಾಗಗಳಿಗೂ ಹರಡಿತು. ಕೆಲವು ಸ್ಥಳಗಳಲ್ಲಿ, ಶಾಲಾ -ಕಾಲೇಜು ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೂ ಕಾರಣವಾಯಿತು. ಬಳಿಕ ಅಹಿತಕರ ಘಟನೆಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಫೆ.9 ರಿಂದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಿತು.
ವಿಚಾರಣೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಈ ವಿಷಯದ ಕುರಿತು ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಮಧ್ಯಂತರ ಆದೇಶದಲ್ಲಿ, ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಕೋರ್ಚ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೇ ವೇಳೆ, ಎಲ್ಲಾ ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್, ಕೇಸರಿ ಶಾಲು ಮತ್ತು ಯಾವುದೇ ಧಾರ್ಮಿಕ ಸಂಕೇತವನ್ನು ಧರಿಸುವುದನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: 'ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ'