ಹರಿಯಾಣ: ‘ಪತಿಯನ್ನು ಪತ್ನಿ ಹತ್ಯೆಗೈದರೂ ಆಕೆ ಪಿಂಚಣಿಗೆ ಅರ್ಹಳು’ ಎಂದು ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಗಂಡನನ್ನು ಹೆಂಡತಿ ಕೊಲೆ ಮಾಡಿದರೂ ಆಕೆಗೇ ಪಿಂಚಣಿ ಸೇರಬೇಕು. ಪಿಂಚಣಿ ಎನ್ನುವುದು ಒಂದು ಕಲ್ಯಾಣ ಯೋಜನೆ. ಸರ್ಕಾರಿ ನೌಕರನ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಇದು ಒದಗಿಸುತ್ತದೆ. ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಸಹ ಪತ್ನಿ ಕುಟುಂಬ ಪಿಂಚಣಿಗೆ ಅರ್ಹಳು ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.
ತೀರ್ಪಿಗೆ ಕಾರಣವಾಗಿದ್ದು ಈ ಪ್ರಕರಣ:
2008 ರಲ್ಲಿ ತಾರ್ಸೆಮ್ ಸಿಂಗ್ ಎಂಬಾತನನ್ನು ಪತ್ನಿ ಬಲ್ಜೀತ್ ಕೌರ್ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2011ರಲ್ಲಿ ಆಕೆಯೇ ಕೊಲೆ ಮಾಡಿದ್ದಾಳೆ ಎಂಬುದು ಸಾಬೀತಾಯಿತು. ಬಳಿಕ ಬಲ್ಜೀತ್ ಕೌರ್ಗೆ ಪಿಂಚಣಿ ಸಿಕ್ಕಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಪತಿಯ ಮರಣದ ನಂತರ 1972 ರ ಸಿಸಿಎಸ್ ನಿಯಮಗಳ ಅಡಿಯಲ್ಲಿ ಹೆಂಡತಿಗೆ ಕುಟುಂಬ ಪಿಂಚಣಿ ಪಡೆಯಲು ಅರ್ಹತೆ ಇದೆ. ಆಕೆ ಮತ್ತೊಂದು ಮದುವೆಯಾದಾಗಲೂ ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ, 2011 ರಿಂದ ತಡೆ ಹಿಡಿದಿರುವ ಪಿಂಚಣಿಯನ್ನು ಆಕೆಯ ಖಾತೆಗೆ ಎರಡು ತಿಂಗಳೊಳಗೆ ಬಿಡುಗಡೆ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದೆ.