ಮುಂಬೈ: ಇಲ್ಲಿನ ಸೋನಾಪುರ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದ ಮುಲುಂಡ್ ನಿವಾಸಿ ಯೋಗೇಶ್ ಪಾಂಚಾಲ್ ಎಂಬುವರಿಗೆ ಹಿಂಬದಿಯಿಂದ ಬಂದ ಡಂಪರ್(ಟ್ರಕ್) ಡಿಕ್ಕಿ ಹೊಡೆದಿತ್ತು. ಪರಿಣಾಮ ಅವರು ಶಾಶ್ವತವಾಗಿ ಅಂಗವಿಕಲರಾಗಿದ್ದರು. ಹೀಗಾಗಿ ಅವರ ದೈಹಿಕ ಮತ್ತು ಮಾನಸಿಕ ನೋವನ್ನು ಗಮನದಲ್ಲಿಟ್ಟುಕೊಂಡು, ಮುಂಬೈ ಹೈಕೋರ್ಟ್ ಒಂದು ಕೋಟಿ ರೂಪಾಯಿ ಪರಿಹಾರ ಕೊಡುವಂತೆ ಆದೇಶಿಸಿದೆ.
ಅರ್ಜಿದಾರ ಯೋಗೇಶ್ ಪಾಂಚಾಲ್ ಅವರು ಲೋಹ ಕಟಾವು ಮಾಡುವ ಕೆಲಸ ಮಾಡುತ್ತಿದ್ದರು. ನವೆಂಬರ್ 29, 2004 ರಂದು ದ್ವಿಚಕ್ರ ವಾಹನದಲ್ಲಿ ಮುಲುಂಡ್‌ನ ಸೋನಾಪುರ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಡಂಪರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಾಂಚಾಲ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆಗೆ ತುಂಬಾ ಹಣ ಖರ್ಚಾಗಿತ್ತು. ಆದರೂ ಅವರು ಶಾಶ್ವತವಾಗಿ ಅಂಗವಿಕಲರಾಗಿದ್ದರು.
ಅಪಘಾತಕ್ಕೆ ಪರಿಹಾರ ನೀಡುವಂತೆ ಪಾಂಚಾಲ್ ಮೋಟಾರು ವಾಹನ ಅಪಘಾತದ ಹಕ್ಕುಗಳ ಮಧ್ಯಸ್ಥಗಾರರಿಗೆ ಅರ್ಜಿ ಸಲ್ಲಿಸಿದರು. ಅಲ್ಲಿ ಅವರಿಗೆ 7.5ರ ಬಡ್ಡಿಯೊಂದಿಗೆ 48 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಸೂಚಿಸಲಾಗಿತ್ತು
ಇದನ್ನೂ ಓದಿ: ಗಾಜಿನ ಬಾಟಲಿಯಲ್ಲಿ ಪಟಾಕಿ ತಂದಿದ್ದರಿಂದ ಗಲಭೆ.. ಯುವಕ ಥಳಿಸಿ ಕೊಂದ ಬಾಲಕರು!
ಆದರೆ ಪಾಂಚಾಲ್ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದರಿಂದ ಅವರು ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯಿಸಿ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಇತ್ತೀಚೆಗೆ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಮುಂದೆ ಇದರ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ಮುಂಬೈ ಹೈಕೋರ್ಟ್ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಈ ಅಪಘಾತದಿಂದಾಗಿ ಅರ್ಜಿದಾರರ ವೈಯಕ್ತಿಕ ಜೀವನವು ಸಂಪೂರ್ಣವಾಗಿ ನಾಶವಾಗಿದೆ. ಅವರು ಸಂಪೂರ್ಣವಾಗಿ ಅಂಗವಿಕಲರಾಗಿದ್ದಾರೆ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿವೆ. ಅರ್ಜಿದಾರರ ಜೀವನವನ್ನು ಮತ್ತೆ ಸರಿಪಡಿಸಲು ಸಾಧ್ಯವಾಗದಿರುವುದನ್ನು ಗಮನಿಸಿದ ನ್ಯಾಯಾಲಯವು ಪರಿಹಾರದ ಮೊತ್ತವನ್ನು ಹೆಚ್ಚಿಸಿದೆ. ಭವಿಷ್ಯದ ವೈದ್ಯಕೀಯ ವೆಚ್ಚಕ್ಕಾಗಿ 23 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಎಲ್ಲಾ ಸೇರಿ ಒಟ್ಟಾಗಿ ಒಂದು ಕೋಟಿ ರೂ. ಪರಿಹಾರ ನೀಡಲು ಸೂಚಿಸಲಾಗಿದೆ.