ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮಾದಕ ವಸ್ತುಗಳ ವ್ಯಾಪಾರ ವಹಿವಾಟು ದಿನೇ ದಿನೇ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗಸಗಸೆ ಬೆಳೆಯ ಕೃಷಿ ತಡೆಗಟ್ಟಲು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಮಾದಕ ವಸ್ತು ನಿಗ್ರಹ ದಳ ಮತ್ತು ಹಣಕಾಸು ಇಲಾಖೆಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದರೂ, ಡ್ರಗ್ಸ್ ಮಾರಾಟ ಅವ್ಯಾಹತವಾಗಿ ಮುಂದುವರೆದಿದೆ. ಡ್ರಗ್ಸ್ ಹಾವಳಿ ಮಟ್ಟ ಹಾಕಲು ನಿಯಂತ್ರಣ ರೇಖೆಯುದ್ದಕ್ಕೂ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಕಾವಲು ಹೆಚ್ಚಿಸಲಾಗಿದೆ. ಇಷ್ಟಾದರೂ ಕಾಶ್ಮೀರದೊಳಗೆ ಹೊರಗಡೆಯಿಂದ ಡ್ರಗ್ಸ್ ಬರುತ್ತಿರುವುದನ್ನು ತಡೆಯಲಾಗುತ್ತಿಲ್ಲ.
ಡ್ರಗ್ಸ್ ಸಾಗಾಟ ಹಾಗೂ ಅದರ ಸೇವನೆಯು ಕಾಶ್ಮೀರದಲ್ಲಿ ಈಗ ಒಂಥರಾ ಟ್ರೆಂಡ್ ಆಗಿದೆ. ಅದರಲ್ಲೂ ಕಾಶ್ಮೀರದಲ್ಲಿ ಹೆರಾಯಿನ್ ಸಾಗಾಟ ಮತ್ತು ಸೇವನೆಯಿಂದ ಭಯೋತ್ಪಾದನೆಯ ಮೇಲೆ ಪರಿಣಾಮಗಳಾಗುತ್ತಿವೆ. ಡ್ರಗ್ಸ್ಗಳಲ್ಲಿ ಕಾಶ್ಮೀರ ಹೆರಾಯಿನ್ ತುಂಬಾ ಬೇಡಿಕೆಯಿರುವ ಡ್ರಗ್ ಆಗಿದೆ ಎಂಬುದು ಈಟಿವಿ ಭಾರತಕ್ಕೆ ಸಿಕ್ಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಭದ್ರತಾ ಪಡೆಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಹೆರಾಯಿನ್ ವಶಪಡಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ.
ಅಂಕಿ-ಅಂಶಗಳ ಪ್ರಕಾರ: 2022ರ ಮೊದಲ 6 ತಿಂಗಳಲ್ಲಿ ಕಾಶ್ಮೀರದಲ್ಲಿ ಡ್ರಗ್ ಪೆಡ್ಲರ್ಗಳಿಂದ 16.237 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಜನವರಿಯಲ್ಲಿ 2.017 ಕೆಜಿ, ಫೆಬ್ರವರಿಯಲ್ಲಿ 5.805 ಕೆಜಿ, ಮಾರ್ಚ್ನಲ್ಲಿ 82.5 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಏಪ್ರಿಲ್ನಲ್ಲಿ ಅತ್ಯಧಿಕ ಅಂದರೆ 7.355 ಕೆಜಿ ಹೆರಾಯಿನ್ ಪತ್ತೆಯಾಗಿದ್ದು, ಮೇ ನಲ್ಲಿ ಇದರ ಪ್ರಮಾಣ 903.96 ಗ್ರಾಂ ಆಗಿತ್ತು. ಇನ್ನು ಜೂನ್, ಜುಲೈ ತಿಂಗಳುಗಳಲ್ಲಿ ಇದು ಕ್ರಮವಾಗಿ 35, 39 ಗ್ರಾಂ ಆಗಿದೆ.
ಹೆರಾಯಿನ್ ಸಾಗಾಟದ ಬಗ್ಗೆ ಮಾಹಿತಿ ಹಂಚಿಕೊಂಡ (ಹೆಸರು ಹೇಳಲಿಚ್ಛಿಸದ) ಅಧಿಕಾರಿಯೊಬ್ಬರು, ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಡ್ರಗ್ಸ್ ಹಾವಳಿ ನಿಯಂತ್ರನಕ್ಕೆ ಬಂದಿಲ್ಲ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗುತ್ತದೆ. ನಿಯಂತ್ರಣ ರೇಖೆಯ ಆಚೆಯಿಂದ ಡ್ರೋನ್ ಮೂಲಕ, ಖುದ್ದಾಗಿ ಅಥವಾ ಇನ್ನಾವುದಾದರೂ ಮಾರ್ಗಗಳ ಮೂಲಕ ಹೆರಾಯಿನ್ ಅನ್ನು ಒಳಗಡೆ ಸಾಗಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕುತೂಹಲದ ವಿಷಯವೆಂದರೆ, ಹೆರಾಯಿನ್ ಮಾತ್ರವಲ್ಲದೆ ಗಾಂಜಾ (129785 ಗ್ರಾಂ), ಅಕ್ರಮ ಮದ್ಯ (133 ಬಾಟಲಿಗಳು), ಬ್ರೌನ್ ಶುಗರ್ (2508.50 ಗ್ರಾಂ), ಚಟಕ್ಕೆ ಬಳಸುವ ಮಾತ್ರೆಗಳು (56139), ಕೊಡೈನ್ (2271 ಬಾಟಲಿಗಳು), ಗಸಗಸೆ ಸ್ಟ್ರಾ (1095.80 ಕೆಜಿ) ಮತ್ತು ಚರಸ್ (72365 ಗ್ರಾಂ) ಹೀಗೆ 7,60,260 ರೂಪಾಯಿ ಮೊತ್ತದ ವಸ್ತುಗಳನ್ನು ವರ್ಷದ ಮೊದಲ 6 ತಿಂಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಾದಕ ವಸ್ತು ಮಾರಾಟ ಆರೋಪದ ಮೇಲೆ ಕಾಶ್ಮೀರದ ಒಂಬತ್ತು ಜಿಲ್ಲೆಗಳ 359 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶೋಪಿಯಾನ್ ಜಿಲ್ಲೆಯಲ್ಲಿ ಮಾತ್ರ ಈ ವರ್ಷ ಇಂಥ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ.