ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಜೂನ್ ತಿಂಗಳಲ್ಲಿ ಹೊಸ ಅಧ್ಯಕ್ಷರು ಆಯ್ಕೆಯಾಗಲಿದ್ದು, ಅದಕ್ಕಾಗಿ ಮೇ ತಿಂಗಳಿನಿಂದಲೇ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೊಸದಾಗಿ ಆಯ್ಕೆಯಾಗುವ ಅಧ್ಯಕ್ಷರ ನೇಮಕ ಪ್ರಕ್ರಿಯೆ ಯಾವ ರೀತಿಯಾಗಿ ನಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನೀಡಿರುವ ಮಾಹಿತಿ ಪ್ರಕಾರ, ಜೂನ್ 2021ರ ವೇಳೆಗೆ ಪಕ್ಷ ಚುನಾಯಿತ ಅಧ್ಯಕ್ಷರನ್ನ ಹೊಂದಲಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಚುನಾವಣೆ ಪ್ರಕ್ರಿಯೆ ಮೇ ತಿಂಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಅದಕ್ಕಾಗಿ ಈ ಸಲ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಮಗ್ರ ಅಧಿವೇಶನ ಕರೆಯುತ್ತಿಲ್ಲ ಎಂದಿದ್ದಾರೆ.
ಓದಿ: ಭಾರೀ ಹಿಮದ ನಡುವೆ ಮಹಿಳೆ,ನವಜಾತ ಶಿಶು ಹೊತ್ತು 6 ಕಿಮೀ ಸಾಗಿದ ಯೋಧರು: ಹೃದಯಸ್ಪರ್ಶಿ ವಿಡಿಯೋ!
ಕಾಂಗ್ರೆಸ್ ಪಕ್ಷದ ಪ್ರಕಾರ ಅಧ್ಯಕ್ಷರು ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ. ಆದರೆ 2017ರಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ರಾಹುಲ್ ಗಾಂಧಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೆ ಇದೀಗ ನಡೆಯುವ ಚುನಾವಣೆ ಮುಂದಿನ ಎರಡು ವರ್ಷಗಳ ಅವಧಿಯ ಅಧ್ಯಕ್ಷರ ನೇಮಕ ಮಾಡಲು. 2022ರಲ್ಲಿ ಹೊಸ ಅಧ್ಯಕ್ಷರ ಆಡಳಿತ ಅವಧಿ ಕೊನೆಗೊಳ್ಳಲಿದೆ.
ಕಾಂಗ್ರೆಸ್ ಚುನಾವಣೆ ಕಾಲೇಜು, ಎಐಸಿಸಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಭಾಗಿಯಾಗಲಿದ್ದು, ತಮಗೆ ಸೂಕ್ತ ಎನಿಸಿದವರಿಗೆ ಮತದಾನ ಮಾಡಬಹುದಾಗಿದೆ. ಸುಮಾರು 1400-1500 ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿ 10 ಎಐಸಿಸಿ ಪ್ರತಿನಿಧಿಗಳಿಂದ ಅನುಮೋದನೆ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ.