ಪಶ್ಚಿಮ ಗೋದಾವರಿ: ರನ್ನಿಂಗ್ ಬೈಕ್ನಲ್ಲೇ ಪ್ರಿಯಕರನ ಬೆನ್ನಿಗೆ ಯುವತಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧರ್ಮವರಂ-ಕಾಪವರಂ ಗ್ರಾಮದ ನಡುವೆ ನಡೆದಿದೆ.
ತಲ್ಲಪುಡಿ ತಾಲೂಕಿನ ಮಲಕಪಲ್ಲಿಯ ಗಾರ್ಸಿಕುಟಿ ಪಾವನಿ ಮತ್ತು ತಾಡೇಪಲ್ಲಿಗೂಡೆಂನ ಪಾತೂರ್ ಗ್ರಾಮದ ನಿವಾಸಿ ಅಂಬಾಟಿ ಕರುಣಾ ತಾತಾಜೀನಾಯುಡು (25) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ವರ್ಷದ ಹಿಂದಿನಿಂದಲೂ ಮದುವೆಯಾಗುವಂತೆ ಪಾವನಿ ತಾತಾಜಿಗೆ ಕೇಳುತ್ತಾ ಬಂದಿದ್ದಾಳೆ. ಇದಕ್ಕೆ ತಾತಾಜಿ ನಿರಾಕರಿಸಿದ್ದಾನೆ.
ಸೋಮವಾರ ಮಧ್ಯಾಹ್ನ ತಾತಾಜೀ ಬೈಕ್ ಮೇಲೆ ಪಂಗಡಿ ಗ್ರಾಮಕ್ಕೆ ಬಂದಿದ್ದಾನೆ. ಮಲಕಪಲ್ಲಿಯಿಂದ ಪಂಗಡಿಗೆ ಬಂದ ಪಾವನಿ ಅವನ ಜೊತೆಗೆ ತೆರಳಿದ್ದಾಳೆ. ರಾತ್ರಿಯ ತನಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ಬಳಿಕ ಆಕೆಯನ್ನು ಮಲಕಪಳ್ಳಿಗೆ ಬಿಡಲು ತೆರಳುತ್ತಿದ್ದಾಗ ಬೈಕ್ನ ಹಿಂಭಾಗದಲ್ಲಿ ಕುಳಿತಿದ್ದ ಪಾವನಿ ತನ್ನ ಬ್ಯಾಗ್ನಿಂದ ಚಾಕು ಹೊರತೆಗೆದು ತಾತಾಜಿ ಬೆನ್ನಿಗೆ ಚುಚ್ಚಿದ್ದಾಳೆ. ತದನಂತರ ಕೆಳಗೆ ಬಿದ್ದ ತಾತಾಜೀಗೆ ಕುತ್ತಿಗೆ, ತಲೆ ಮತ್ತು ಬೆನ್ನಿಗೆ ಪಾವನಿ ಮನಸೋಚ್ಛೆ ಚುಚ್ಚಿದ್ದಾಳೆ. ತೀವ್ರ ರಕ್ತಸ್ರಾವದಿಂದ ತಾತಾಜಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತನ್ನ ಪ್ರಿಯಕರನ ಮೃತದೇಹದ ಮುಂದೆಯೇ ರೋದಿಸುತ್ತಿದ್ದ ಪಾವನಿಯನ್ನು ಗಮನಿಸಿದ ಸ್ಥಳೀಯರು ಗ್ರಾಮದ ಪೊಲೀಸರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತ ತಾತಾಜಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಯುವತಿಯನ್ನು ವಶಕ್ಕೆ ಪಡೆದರು.
ಈ ಘಟನೆ ಕುರಿತು ಯುವತಿ ಪಾವನಿ ಮೇಲೆ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.