ಹೈದರಾಬಾದ್, ತೆಲಂಗಾಣ: ಬಾರಿ ಮಳೆ ತೆಲಂಗಾಣದ ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೈದರಾಬಾದ್, ಕರೀಂನಗರ, ವಾರಂಗಲ್, ಭೂಪಾಲಪಲ್ಲಿ ಮುಂತಾದೆಡೆ ವರ್ಷಧಾರೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಕರೀಂನಗರದ ಗೀತಾ ಭವನ್ ಬಳಿ ಹೆಚ್ಚು ಮಳೆ ಮತ್ತು ಗಾಳಿಯ ಕಾರಣದಿಂದಾಗಿ ಹೋರ್ಡಿಂಗ್ಗಾಗಿ ನಿರ್ಮಿಸಲಾಗಿದ್ದ 72 ಅಡಿ ಎತ್ತರದ ರಚನೆಯೊಂದು ಧರೆಗುರುಳಿದೆ. ಫೆಬ್ರವರಿ ತಿಂಗಳಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಬ್ರಹ್ಮೋತ್ಸವ ನಿಮಿತ್ತ ಈ ಹೋರ್ಡಿಂಗ್ ಅನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನು ಸುಮಾರು 45 ಲಕ್ಷ ರೂಪಾಯಿಯಲ್ಲಿ ನಿರ್ಮಿಸಲಾಗುತ್ತಿತ್ತು.
ಕರೀಂನಗರ ಜಿಲ್ಲೆಯ ಚೋಪದಂಡಿ, ರಾಮಡುಗು, ಮಾನಕೊಂಡೂರು, ಪೆಗಡಪಲ್ಲಿ, ಶಂಕರಪಟ್ಟಣ ಮತ್ತು ಸುಲ್ತಾನಾಬಾದ್ ಮಂಡಲ್ಗಳಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾಗಿದೆ. ಹಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಸಿರಿಸಿಲ್ಲಾ ಜಿಲ್ಲೆಯ ವೀರನಪಲ್ಲಿ, ರಂಗಂಪೇಟ, ಗರ್ಜನಪಲ್ಲಿ, ಲಾಲ್ ಸಿಂಗ್ ನಾಯಕ್ ತಾಂಡಾ, ಅಡವಿ ಪದಿರ ಮತ್ತಿತರ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಬಲವಾದ ಗಾಳಿಯಿಂದಾಗಿ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಹೈದರಾಬಾದ್ ನಗರದಲ್ಲಿ ಮಳೆ
ಹೈದರಾಬಾದ್‌ನ ಹಲವೆಡೆ ಭಾರೀ ಮಳೆಯಾಗಿದೆ. ಮೌಲಾ ಅಲಿ, ಕುಶಾಯಿಗುಡ, ಚರ್ಲಪಲ್ಲಿ, ಜವಾಹರ್ ನಗರ, ಕೀಸರ ಮತ್ತು ದಮ್ಮಾಯಿಗುಡ್ಡದಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ವಾರಂಗಲ್ ಜಿಲ್ಲೆಯಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಯಶಂಕರ್ ಭೂಪಾಲ್ಪಲ್ಲಿಯಲ್ಲಿ ಗುಡುಗು ಮತ್ತು ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಇದನ್ನೂ ಓದಿ: ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷದೊಳಗಿನವರಿಗೆ ಶೇ.100ರಷ್ಟು ಕೋವಿಡ್ ಲಸಿಕೆ ಪೂರ್ಣ