ಅನಂತಪುರ (ಆಂಧ್ರಪ್ರದೇಶ) : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅನಂತಪುರ ಜಿಲ್ಲೆ ಸಂಪೂರ್ಣ ಜಲಾವೃತಗೊಂಡಿದೆ. ಪ್ರಕೃತಿ ವಿಕೋಪ ಇಲಾಖೆಯ ಜಿಲ್ಲಾ ಸಿಬ್ಬಂದಿ ಅಪಾಯದ ಅಂಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಪೀಡಿತರನ್ನು ರಕ್ಷಿಸುತ್ತಿದ್ದಾರೆ. ನಗರದ 20 ಕಾಲೋನಿಗಳು ಜಲಾವೃತವಾಗಿದ್ದು,ಇಲ್ಲಿನ ನದಿಮಿವಂಕ ಹೊಳೆಯ ನೀರಿನ ಮಟ್ಟ ನಿರಂತರವಾಗಿ ಹೆಚ್ಚಳವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ತಂಡವು ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಕೈಗೊಂಡಿದೆ. ಇದುವರೆಗೆ ಒಂದು ಸಾವಿರ ಜನರನ್ನು ಜಲಾವೃತಗೊಂಡ ಮನೆಗಳಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪಾಂಡಮೇರು ನದಿ ಉಕ್ಕಿ ಹರಿಯುತ್ತಿರುವುದರಿಂದ ಅನಂತಪುರ ಮತ್ತು ತಾಡಿಪತ್ರಿ ನಡುವಿನ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿನ ಬುಕ್ಕರಾಯಸಮುದ್ರ ಮಂಡಲದಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಜೊತೆಗೆ ಇಲ್ಲಿನ ನದಿ ಪಾತ್ರದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ.
ರಾಯದುರ್ಗದ ಹಲವು ಕಾಲೋನಿಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಾಯದುರ್ಗದ ರಾಮಸ್ವಾಮಿನಗರ, ಮಧು ಟಾಕೀಸ್‌ಗೆ ಮತ್ತು ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ದೊಡ್ಡ ದೊಡ್ಡ ಮೀನುಗಳು ಮನೆಗಳಿಗೆ ನುಗ್ಗಿವೆ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಹಲವು ಗ್ರಾಮ ಜಲಾವೃತಗೊಂಡಿದೆ. ಗ್ರಾಮದ ಕೆರೆ ತುಂಬಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಪ್ರವಾಹದ ನೀರನ್ನು ನಿಯಂತ್ರಿಸಲು ಯಂತ್ರಗಳ ಮೂಲಕ ಪಂಪ್ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ : ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಗುಂಡಿನ ದಾಳಿ, ಪತ್ನಿ ಸಾವು.. ಯುಪಿ ಪೊಲೀಸರ ವಿರುದ್ಧ ಕೊಲೆ ಕೇಸ್