ನವದೆಹಲಿ: ದೇಶದೆಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಅನೇಕ ರಾಜ್ಯಗಳಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮುಖ್ಯವಾಗಿ ಬಿಹಾರ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಳೆ ಅಬ್ಬರಿಸುತ್ತಿದೆ.
ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇಲ್ಲಿನ ಆಡಳಿತ ಯೆಲ್ಲೋ ಅಲರ್ಟ್ ಘೋಷಿಸಿದೆ. ಕುಲ್ಲು ಜಿಲ್ಲೆಯಲ್ಲಿ ಸುಮಾರು 25 ರಸ್ತೆಗಳನ್ನು ಬಂದ್ ಮಾಡಲಾಗಿದೆ. 8 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಭಾರಿ ಮಳೆಗೆ ಹಾನಿಗೊಂಡಿದೆ. ಇನ್ನು ಕಾಂಗ್ರಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇಬ್ಬರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. 10 ಮಂದಿ ಕಾಣೆಯಾಗಿದ್ದು, 20 ಮಂದಿಯನ್ನು ರಕ್ಷಿಸಲಾಗಿದೆ. ಕಳೆದ ದಿನ ಮಳೆಗೆ ಭಾರಿ ಗುಡ್ಡ ಕುಸಿದಿದ್ದು, ಕಾಂಗ್ರಾ ಜಿಲ್ಲೆಯ ಬೋ ಕಣಿವೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಂದಾಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಚಾರಣಕ್ಕೆ ತೆರಳಿದ್ದ 100 ಕ್ಕೂ ಹೆಚ್ಚು ಜನರು, ಕೆಲವು ಕುಟುಂಬಗಳನ್ನು ರಕ್ಷಿಸಲಾಗಿದೆ.
ಬಿಹಾರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಿಹಾರ ತತ್ತರಿಸಿದೆ. ಹಲವೆಡೆ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ದೋಣಿ ಮೂಲಕ ಪ್ರಯಾಣಿಸುತ್ತಿದ್ದಾರೆ. ಗಂಗೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈಗಾಗಲೇ 63.63 ಮೀಟರ್ ಎತ್ತರಕ್ಕೆ ನೀರು ತಲುಪಿದೆ. ಈ ಹಿನ್ನೆಲೆಯಲ್ಲಿ ಜನರು ಗಂಗೆಯ ತೀರಕ್ಕೆ ತೆರಳದಂತೆ ಆಡಳಿತ ಸೂಚನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶದಲ್ಲಿಯೂ ಸಹ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಬೆಟ್ಟ-ಗುಡ್ಡಗಳು ಧರೆಶಾಹಿಯಾಗಿವೆ. ಇಲ್ಲಿನ ದೋಡಾದ ಕಾಸ್ತಿಗ ಗ್ರಾಮದ ಸಮೀಪದ ರಸ್ತೆಯೊಂದರಲ್ಲಿ ಕಾರು ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡ ಕಾರನ್ನು ಜೆಸಿಬಿ ಬಳಸಿ ಹೊರತೆಗೆಯಲಾಗುತ್ತಿದೆ. ಸದ್ಯ ಶ್ರೀನಗರದಲ್ಲಿ ವನ್ವೇ ರಸ್ತೆ ತೆರೆಯಲಾಗಿದ್ದು, ಅಗತ್ಯ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.
ದೆಹಲಿ: ದೆಹಲಿಯಲ್ಲಿ ಬೆಳಗ್ಗೆಯಿಂದ ಮಳೆ ಅಬ್ಬರಿಸುತ್ತಿದ್ದು, ಎನ್‌ಸಿಆರ್ ಬಹದ್ದೂರ್‌ಗಢ, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಏಮ್ಸ್ ಆಸ್ಪತ್ರೆ ಬಳಿಕ ಫ್ಲೈ ಓವರ್ ಕೆಳಗೆ ನೀರು ನಿಂತಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.