ಕುಲು(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ ಉಂಟಾಗಿದೆ. ಕುಲು ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದೆ. ಮನೆಗಳ ಮೇಲೆ ಮರಗಳು ಉರುಳಿಬಿದ್ದು ಮಹಿಳೆ ಮತ್ತು ಮಗು ಮೃತಪಟ್ಟಿದ್ದಾರೆ. ಜೊತೆಗೆ 7 ವಾಹನಗಳು ಕೊಚ್ಚಿ ಹೋಗಿವೆ. ಮೇಘ ಸ್ಫೋಟದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾತ್ರಿಯಿಡೀ ಮಳೆ: ಕುಲು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಪೂರ್ತಿ ಮಳೆ ಸುರಿದಿದೆ. ಇಲ್ಲಿನ ಬಸ್ ನಿಲ್ದಾಣದಲ್ಲಿನ ನಗರ ಪಂಚಾಯಿತಿಯ 5 ಅಂಗಡಿಗಳು ನೀರಿಗೆ ಕೊಚ್ಚಿ ಹೋಗಿವೆ. ಅಂಗಡಿಗಳಲ್ಲಿ ಇಟ್ಟಿದ್ದ ವಸ್ತುಗಳೆಲ್ಲ ನಾಶವಾಗಿವೆ.
ವಾರದಿಂದ ನಿರಂತರ ಭೂಕುಸಿತ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಲವೆಡೆ ಭೂಕುಸಿತ ಸಂಭವಿಸುತ್ತಿದೆ. ಇತ್ತೀಚೆಗೆ ಆರಂಭಿಸಲಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆಯ ಅವಶೇಷಗಳು ಇನ್ನೊಂದೆಡೆ ಬಿದ್ದಿವೆ. ಜೊತೆಗೆ 3 ಆಲ್ಟೊ, 2 ಬೈಕ್, 1 ಬುಲೆರೊ ಮತ್ತು 1 ಕಾರು ಕೊಚ್ಚಿ ಹೋಗಿವೆ.
ಹಾಲಿನ ಪ್ಲಾಂಟ್ಗೂ ಭಾರೀ ಹಾನಿ ಉಂಟಾಗಿದ್ದು, ಬಿಯಾಸ್ ನದಿ ಸೇರಿದಂತೆ ಸಣ್ಣ ನದಿಗಳು ಮತ್ತು ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆಗಸ್ಟ್ 13 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.