ಏಲೂರು (ಆಂಧ್ರ ಪ್ರದೇಶ): ಅನುಮಾನಾಸ್ಪದ ರೀತಿಯಲ್ಲಿ ಜನರು ಮೂರ್ಛೆ ಹೋಗುತ್ತಿದ್ದ ನಿಗೂಢ ಕಾಯಿಲೆಗೆ ನೀರು ಮತ್ತು ಹಾಲಿನಲ್ಲಿರುವ ಸೀಸ ಮತ್ತು ನಿಕ್ಕಲ್ ಕಾರಣವಿರಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಡಿಸೆಂಬರ್ 6ರಂದು ಸುಮಾರು 300 ಮಂದಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದು, ಯಾವುದೇ ಕಾರಣವಿಲ್ಲದೇ ಮೂರ್ಛೆ ಹೋಗುತ್ತಿದ್ದರು. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಅವರು ಮೂರ್ಛೆ ಹೋಗಲು ಕಾರಣವೇನೆಂದು ತಿಳಿಯಲು ಸರ್ಕಾರ ನಿರ್ಧರಿಸಿದ್ದು, ಸ್ಥಳಕ್ಕೆ ಆಗಮಿಸಿದ ಏಮ್ಸ್ ಹಾಗೂ ರಾಜ್ಯದ ಕೆಲವು ಸಂಸ್ಥೆಗಳು ಸಂಶೋಧನಾ ತನಿಖೆ ನಡೆಸಿದ್ದವು. ಸದ್ಯಕ್ಕೆ ಏಮ್ಸ್ನ ತಜ್ಞರು ಸಿಎಂ ಜಗನ್ ಮೋಹನ್ ರೆಡ್ಡಿಗೆ ಪ್ರಾಥಮಿಕ ಸಂಶೋಧನಾ ವರದಿ ಸಲ್ಲಿಸಿವೆ.
ಏಮ್ಸ್ನ ವರದಿಯ ಸಾರಾಂಶವನ್ನು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದ್ದು, ಅಸ್ವಸ್ಥರ ದೇಹದಲ್ಲಿ ಸೀಸ ಮತ್ತು ನಿಕ್ಕಲ್ ಪತ್ತೆಯಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಸ್ವಸ್ಥರ ಸಂಖ್ಯೆ ಏರಿಕೆಯಾಗಿದ್ದು, ಅವರು ಮೂರ್ಛೆ ಮತ್ತು ವಾಕರಿಕೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿಯಿದೆ.
ಇದರ ಜೊತೆಗೆ ಎಪಿಲೆಪ್ಸಿ (ಅಪಸ್ಮಾರ), ನೆನಪಿನ ಶಕ್ತಿ ಕುಂದುವಿಕೆ, ವಾಂತಿ, ತಲೆನೋವು, ಬೆನ್ನು ನೋವು ಮುಂತಾದ ಲಕ್ಷಣಗಳನ್ನು ಈ ರೋಗ ಹೊಂದಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಂಧ್ರದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋದ 300 ಮಂದಿ: ಅಸ್ವಸ್ಥರು ಆಸ್ಪತ್ರೆಗೆ ದಾಖಲು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯು ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿದೆ. ಸಿಎಂ ಜಗನ್ ಅಸ್ವಸ್ಥರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಕಂಡು ಬರುತ್ತಿರುವುದಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ಸೂಚನೆ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿಯಂತೆ ಸುಮಾರು 505 ಮಂದಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದಿವೆ. ಇದರಲ್ಲಿ 370 ಮಂದು ಗುಣಮುಖರಾಗಿದ್ದಾರೆ. ಇನ್ನೂ 120 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಟೂರು ಸರ್ಕಾರಿ ಆಸ್ಪತ್ರೆಗೆ ಹಾಗೂ ವಿಜಯವಾಡ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 19 ಮಂದಿ ರೋಗಿಗಳನ್ನು ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೊರತುಪಡಿಸಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮೂರು ಸದಸ್ಯರ ತಂಡವನ್ನು ಸಮಸ್ಯೆಗೆ ಕಾರಣ ಪತ್ತೆ ಹಚ್ಚಲು ಮತ್ತು ಪರಿಹಾರ ಕಂಡು ಹಿಡಿಯಲು ನಿಯೋಜಿಸಲಾಗಿದೆ. ಈ ತಂಡಗಳು ಏಲೂರು ಪಟ್ಟಣಕ್ಕೆ ಹಾಗೂ ಅಸ್ವಸ್ಥರಿರುವ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಎ ಕೆ ಕೆ ಶ್ರೀನಿವಾಸ್, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಏಲೂರು ಪಟ್ಟಣವನ್ನು ಸ್ವಚ್ಛಗೊಳಿಸಲಾಗುತ್ತಿದೆ.