ನವದೆಹಲಿ: ಬೇಸಿಗೆ ಬಿರುಬೇಸಿಗೆಯಾಗಿ ಮಾರ್ಪಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಬಿಸಿಲ ಝಳಕ್ಕೆ ತತ್ತರಿಸುತ್ತಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಸಫ್ದರ್‌ಜಂಗ್ ಬಾಹ್ಯಾಕಾಶ ವೀಕ್ಷಣಾಲಯದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
2010ರಲ್ಲಿ ಈ ಪ್ರದೇಶದಲ್ಲಿ 43.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಶನಿವಾರ 43.5 ಡಿಗ್ರಿ ಸೆಲ್ಸಿಯಸ್ ಕಂಡುಬರುವ ಮೂಲಕ ದಾಖಲೆ ಮುಟ್ಟಲು 0.2 ಡಿಗ್ರಿ ಸೆಲ್ಸಿಯಸ್‌ಯಷ್ಟೇ ಕಡಿಮೆ ಇದೆ. ಸಫ್ದರ್‌ಜಂಗ್ ದೆಹಲಿಯ ಬೇಸ್ ಸ್ಟೇಷನ್ನಲ್ಲಿ ಏಪ್ರಿಲ್ 18, 2010ರಂದು 43.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಏಪ್ರಿಲ್ 29, 1941ರಂದು 45.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಈ ದಾಖಲೆಗಳಿಗೆ 43.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಸಮೀಪದಲ್ಲಿದೆ. ಗುರುವಾರವೂ ಗರಿಷ್ಠ ತಾಪಮಾನ ಅಂದರೆ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಲೋಧಿ ರಸ್ತೆ ಮತ್ತು ಮಯೂರ್ ವಿಹಾರ್ ಹೊರತುಪಡಿಸಿ, ದೆಹಲಿಯ ಇತರ ನಿಲ್ದಾಣಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕಂಡುಬಂದಿದೆ. ಮುಂಗೇಶ್‌ಪುರದಲ್ಲಿ 46 ಡಿಗ್ರಿ ಸೆಲ್ಸಿಯಸ್, ಅಕ್ಷರಧಾಮ ಬಳಿಯ ಕ್ರೀಡಾ ಸಂಕೀರ್ಣದಲ್ಲಿ 47.1 ಡಿಗ್ರಿ ಸೆಲ್ಸಿಯಸ್ ಕಂಡುಬಂತು.
ಭಾರತದ ಹವಾಮಾನ ಇಲಾಖೆ ತಾಪಮಾನದ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರದಂದು ಮೋಡ ಕವಿದ ವಾತಾವರಣವಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 43 ಮತ್ತು 25 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ನವದೆಹಲಿ ಹೊರತುಪಡಿಸಿ, ಮಹಾರಾಷ್ಟ್ರದ ಚಂದ್ರಾಪುರದಲ್ಲಿ 46.6 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ದಾಖಲಾಗಿದೆ. ಚಂಡೀಗಢ, ಹಿಮಾಚಲ ಪ್ರದೇಶ, ಪಶ್ಚಿಮ ರಾಜಸ್ಥಾನದ ಹಲವು ಭಾಗಗಳಲ್ಲಿ, ಪಂಜಾಬ್ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ. ವಾಯವ್ಯ ಮತ್ತು ಮಧ್ಯ ಭಾರತದಲ್ಲಿ ಮೇ 2ರವರೆಗೆ ಬಿಸಿಗಾಳಿ ಮುಂದುವರೆಯುತ್ತದೆ. ಭಾನುವಾರದಿಂದ ಬಿಸಿಗಾಳಿ ಪೂರ್ವಭಾರತದಲ್ಲಿ ಕಡಿಮೆಯಾಗುತ್ತದೆ ಎಂದು ಐಎಂಡಿ ಹೇಳಿದೆ.
ಇದನ್ನೂ ಓದಿ: ಮಾಜಿಗಳಿಗೆ ಚಾಟಿ ಬೀಸಿದ ಮಾಜಿಗಳು: ಪ್ರಧಾನಿ ಮೋದಿ ಆಡಳಿತಕ್ಕೆ ಸಮರ್ಥನೆ ಹೀಗಿದೆ..