ನವದೆಹಲಿ: ಕರ್ನಾಟಕದಲ್ಲಿ 5 ದಿನಗಳ ನಂತರ ನಡೆಯಲಿರುವ ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಹಾಜರಾಗಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪೀಠ ರಚಿಸಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ ಈ ವಿಷಯವನ್ನು ಹೋಳಿ ಹಬ್ಬದ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಐದು ದಿನಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಈ ಪ್ರಕರಣದ ವಿಚಾರಣೆ ಬೇಗ ನಡೆಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಕರ್ನಾಟಕದಲ್ಲಿ 5 ದಿನಗಳ ನಂತರ ಮಾರ್ಚ್ 9 ರಂದು ನಡೆಯುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಹಾಜರಾಗಲು ಅನುಮತಿ ಕೋರಿ ಷರಿಯತ್ ಸಮಿತಿಯು ಮನವಿ ಸಲ್ಲಿಸಿದೆ. ವರದಿಗಳ ಪ್ರಕಾರ ಫೆಬ್ರವರಿ 22 ರಂದು ವಕೀಲ ಶಾದನ್ ಫರಾಸತ್ ಅವರು ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಶಿರವಸ್ತ್ರ ಧರಿಸಿ ಪಿಯುಸಿ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ನಿರ್ದೇಶನ ಕೋರಿ ನ್ಯಾಯಾಲಯದ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದರು.
ವಿಭಜಿತ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ : ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಪದವಿ ಪೂರ್ವ ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ಮೇಲಿನ ನಿಷೇಧದ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳ ಮೇಲೆ ವಿಭಜಿತ ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ವಿಭಿನ್ನ ತೀರ್ಪು ನೀಡಿದೆ.
ಏಕರೂಪದ ಡ್ರೆಸ್ ಕೋಡ್ಗೆ ಸರ್ಕಾರದ ನಿಯಮ : ಪರೀಕ್ಷಾ ಕೇಂದ್ರಗಳ ಒಳಗೆ ಹಿಜಾಬ್ ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. 2021 ರಲ್ಲಿ ಉಡುಪಿಯ ಕೆಲ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ಹಿಜಾಬ್ ಧರಿಸಿ ಬರಲು ಆರಂಭಿಸಿದ ನಂತರ ಹಿಜಾಬ್ ವಿವಾದ ಆರಂಭವಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಏಕರೂಪದ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಮತ್ತು ಯಾವುದೇ ಧಾರ್ಮಿಕ ವಸ್ತ್ರಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕಾಲೇಜು ಮತ್ತು ಸರ್ಕಾರವು ಸ್ಪಷ್ಟ ಆದೇಶಗಳನ್ನು ನೀಡಿತ್ತು. ಈ ವಿಚಾರ ಬಳಿಕ ಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ತರಗತಿಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂಬ ಶಿಕ್ಷಣ ಇಲಾಖೆ ಆದೇಶವನ್ನು ಎತ್ತಿ ಹಿಡಿದಿತ್ತು.
ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದಿದ್ದ ಹೈಕೋರ್ಟ್ : ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂಬ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ವಿಭಿನ್ನ ತೀರ್ಪು ಬಂದಿತ್ತು. ಅದೀಗ ಮೂವರು ನ್ಯಾಯಮೂರ್ತಿಗಳ ಪೀಠದ ಎದುರು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ : ಈ ಬಾರಿ ಕೂಡ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ; ಬಿಸಿ ನಾಗೇಶ್ ಸ್ಪಷ್ಟನೆ