ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಮಿಷನ್ ಇಂದ್ರಧನುಷ್ 4.0 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವರು, 'ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕಾ ವ್ಯಾಪ್ತಿ ಶೇ 90 ರಷ್ಟು ಇರಬೇಕು ಎಂದು ಬಯಸುತ್ತಾರೆ. ರಾಜ್ಯಗಳು ಮತ್ತು ಕೇಂದ್ರಗಳು ಇದಕ್ಕೆ ಸಾಮೂಹಿಕ ಪ್ರಯತ್ನ ಮಾಡಬೇಕು ಎಂದರು.
ಈಗಾಗಲೇ ದೇಶಾದ್ಯಂತ ಒಟ್ಟು 170 ಕೋಟಿ ಡೋಸ್ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ. ಲಸಿಕೆಗಳು ಮಕ್ಕಳನ್ನು ಮತ್ತು ತಾಯಂದಿರನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತವೆ. ಈ ಮೊದಲು 43 ಪ್ರತಿಶತದಷ್ಟು ಲಸಿಕೆ ನೀಡಲಾಯಿತು. ಈಗ ಅದು ಶೇ. 76ಕ್ಕೆ ತಲುಪಿದೆ ಎಂದು ಎಂದು ಮಾಂಡವಿಯಾ ಮಾಹಿತಿ ನೀಡಿದರು.
ಒಂದು ಹನಿ ಪೋಲಿಯೋ ಲಸಿಕೆ ಒಂದು ಜೀವವನ್ನು ಉಳಿಸಬಹುದು. ನವಜಾತ ಶಿಶುಗಳನ್ನು ಪೋಲಿಯೋ ಮತ್ತು ಇತರ ರೋಗಗಳಿಂದ ರಕ್ಷಿಸಲು ಮತ್ತು ಅವರ ಭವಿಷ್ಯ ಭದ್ರಪಡಿಸಿಕೊಳ್ಳಲು ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.
ಇದನ್ನೂ ಓದಿ: ಬಿಹಾರದಲ್ಲೊಬ್ಬ 'ಡಿಜಿಟಲ್ ಭಿಕ್ಷುಕ'.. ಕೊರಳಿನಲ್ಲಿ ಕ್ಯೂಆರ್ ಕೋಡ್ ಫಲಕ, ಕೈಯಲ್ಲಿ ಟ್ಯಾಬ್ ಹಿಡಿದು ಭಿಕ್ಷಾಟನೆ!!
ಏನಿದು ಮಿಷನ್ ಇಂದ್ರಧನುಷ್: ಮಾರಣಾಂತಿಕ ಕಾಯಿಲೆಗಳ ವಿರುದ್ಧ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಲಸಿಕೆ ಹಾಕುವ ಯೋಜನೆಯೇ ಮಿಷನ್ ಇಂದ್ರಧನುಷ್. ಈ ಯೋಜನೆಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 25 ಡಿಸೆಂಬರ್ 2014ರಂದು ಚಾಲನೆ ನೀಡಿತು.