ಅಲಹಾಬಾದ್: ಇಲ್ಲಿನ ಹೈಕೋರ್ಟ್ ಸರಗಳ್ಳತನ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ. ಮಹಿಳೆಯರಲ್ಲಿ ಭಯ ಉಂಟು ಮಾಡುವ, ಅವರ ಚಲನಶೀಲತೆಯನ್ನು ನಿರ್ಬಂಧಿಸುವುದರಿಂದ ಇಂಥ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಚೈನ್ಅನ್ನು ಕಸಿದುಕೊಳ್ಳುವುದು ತೀವ್ರ ಆತಂಕದ ವಿಷಯವಾಗಿದ್ದು, ಮಹಿಳೆಯರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಾನ್ಪುರದ ಅಮಿತ್ ಎಂಬಾತನ ಜಾಮೀನು ಅರ್ಜಿ ತಿರಸ್ಕರಿಸಿರುವ ಕೋರ್ಟ್, ಮಹಿಳೆಯರಿಗೆ ಸುರಕ್ಷಿತ ಭಾವನೆ ಮೂಡಿಸಲು ಅಪರಾಧಿಗಳಿಗೆ ಭಯ ಮೂಡಿಸಬೇಕು ಎಂದು ಹೇಳಿದೆ. ಅಮಿತ್ ಹಲವಾರು ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗಳು ಕಾನೂನಿನ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಬಹುದು. ಆದರೆ, ಅದೇ ಕಾನೂನು ಅವರು ಮಾಡಿರುವ ತಪ್ಪಿಗೆ ಶಿಕ್ಷೆ ವಿಧಿಸಿ, ಸಮಾಜಕ್ಕೂ ಸರಿಯಾದ ಸಂದೇಶ ರವಾನಿಸಬೇಕಾಗಿದೆ. ಇದರಿಂದಾಗಿ ಮಹಿಳೆಯರಿಗೆ ತಾವು ಸುರಕ್ಷಿತ ಎಂಬ ಮನೋಭಾವನೆ ಮೂಡಬೇಕು ಎಂದು ಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ
2020 ರ ಅಕ್ಟೋಬರ್ 4 ರಂದು ಪುಷ್ಪಾದೇವಿ ಎಂಬುವರು ಆಟೋದಲ್ಲಿ ಕುಳಿತಿದ್ದಾಗ ಅಪರಿಚಿತರಿಬ್ಬರು ಆಕೆಯ ಸರ ಕಸಿದು ಪರಾರಿಯಾಗಿರುತ್ತಾರೆ. ಆ ಸಮಯದಲ್ಲಿ ಪುಷ್ಪಾ, ಪಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಅಮಿತ್ ಸೇರಿ ಇಬ್ಬರನ್ನು ಬಂಧಿಸಿರುತ್ತಾರೆ. ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.
ಇದನ್ನೂ ಓದಿ:ಪುತ್ತೂರು: ಅಪ್ರಾಪ್ತೆಯ ಮಾನಭಂಗ ಯತ್ನ ಪ್ರಕರಣ, ತಪ್ಪಿತಸ್ಥ ಶಾಫಿಗೆ ಶಿಕ್ಷೆ