ಹೈದರಾಬಾದ್: ಕಳೆದ ಒಂದು ವರ್ಷದಿಂದಲೂ ಜನರು ಕೊರೊನಾ ಸೋಂಕಿನೊಂದಿಗೆ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅನೇಕರು ಈ ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಯಾವ ಸಮಯದಲ್ಲಿ ಬೇಕಾದ್ರೂ ಸೋಂಕು ನಮಗೆ ಹರಡಬಹುದು ಎಂಬ ಆತಂಕ ಬಹುತೇಕರಲ್ಲಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು? ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೇ? ಎಂಬ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಓಡಾಡಲು ಶುರುವಾಗುತ್ತವೆ. ಈ ಎಲ್ಲ ಗೊಂದಲಗಳಿಗೆ ಸಂಪೂರ್ಣವಾದ ಉತ್ತರವಿದೆ.
ನೀವೇನು ಮಾಡಬೇಕು..
ಎಲೂರಿನ ಆಸ್ರಾಮ್(ASRAM) ವೈದ್ಯಕೀಯ ಕಾಲೇಜ್ನ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗುಂಟುಪಲ್ಲಿ ಶ್ರೀನಿವಾಸನ್ ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಯಿರಿ..
ಪ್ರತಿದಿನ ಸೋಂಕಿತರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ
ಮೊದಲ ದಿನ
ಕೊರೊನಾ ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ(ಕುಟುಂಬದಲ್ಲಿ) ಮನೆಯಲ್ಲಿ ಬೇಗ ಹರಡುತ್ತದೆ. ನಮ್ಮಲ್ಲಿ ಜ್ವರ. ನೆಗಡಿ, ಗಂಟಲಿನಲ್ಲಿ ನೋವು, ಆಯಾಸ ಕಂಡು ಬಂದರೆ ತಕ್ಷಣವೇ ಐಸೋಲೇಷನ್ಗೆ ಒಳಗಾಗಬೇಕು. ಜ್ವರಕ್ಕೆ ಸಾಮಾನ್ಯವಾಗಿ ಸಿಟ್ರಾಜನ್(Cetirizine) ಅಥವಾ ಪ್ಯಾರೆಸಿಟಮಾಲ್(Paracetamol) ಮಾತ್ರೆ ತೆಗೆದುಕೊಳ್ಳಬಹುದು. ಸಾಧ್ಯವಾದರೆ ಮೊದಲ ದಿನವೇ ಫ್ಯಾಮಿಲಿ ಡಾಕ್ಟರ್ ಅಥವಾ ಬೇರೆ ವೈದ್ಯರನ್ನ ಸಂಪರ್ಕಿಸಿ.
2ನೇ ದಿನ
ಐಸೋಲೇಷನ್ನಲ್ಲಿದ್ದುಕೊಂಡು ವೈದ್ಯರ ಸೂಚನೆಯಂತೆ ಮಾತ್ರೆ ಅಥವಾ ಔಷಧಿ ತೆಗೆದುಕೊಳ್ಳಬೇಕು. ರೋಗ ಲಕ್ಷಣಗಳ ಬಗ್ಗೆ ವೈದ್ಯರ ಗಮನಕ್ಕೆ ತರಬೇಕು. ಜತೆಗೆ ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುತ್ತಿರಬೇಕು.
3ನೇ ದಿನ
ಕೋವಿಡ್ ಗುಣಲಕ್ಷಣಗಳು ಉಲ್ಬಣಗೊಳ್ಳಲು ಶುರು ಮಾಡಿದ್ರೆ, ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಆದರೆ ಔಷಧಿ ಮುಂದುವರಿಸಿರಬೇಕು.
4ನೇ ದಿನ
ನಾವು ಮಾಡಿಸಿರುವ ಆರ್ಟಿ-ಪಿಸಿಆರ್ ನೆಗೆಟಿವ್ ಬಂದರೂ ಕೂಡ ಔಷಧಿ ಮುಂದುವರೆಸಿರಬೇಕು. ಪಾಸಿಟಿವ್ ಬಂದರೆ ವೈದ್ಯರಿಗೆ ಮಾಹಿತಿ ನೀಡಬೇಕು. ವೈರಸ್ಗೆ ಅಗತ್ಯವಾದ ಔಷಧಿ ಪಡೆದುಕೊಳ್ಳಲು ಪ್ರಾರಂಭಿಸಬೇಕು.
ಪಲ್ಸ್ ಆಕ್ಸಿಮೀಟರ್ಅನ್ನು ಯಾವಾಗಲೂ ಇಟ್ಟುಕೊಡಿರಬೇಕು. ಶುದ್ಧ ಆಕ್ಸಿಜನ್ ಸಿಗುವ ಕಡೆ ಕುಳಿತುಕೊಳ್ಳಬೇಕು. ನೀವೂ ಐಸೋಲೇಷನ್ ಆಗುವ ಕೋಣೆಯಲ್ಲಿ ಆರು ನಿಮಿಷಗಳ ಕಾಲ ನಡೆದಾಡಬೇಕು. ಈ ಪ್ರಕ್ರಿಯೆ ದಿನಕ್ಕೆ ನಾಲ್ಕು ಬಾರಿ ಮಾಡಬೇಕು. ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆ ಇದ್ದರೆ ತಕ್ಷಣವೇ ವೈದ್ಯರನ್ನ ಭೇಟಿ ಮಾಡಿ.
5ನೇ ದಿನ
ಜ್ವರ ಕಡಿಮೆಯಾಗುವ ಬದಲು ತೀವ್ರಗೊಂಡರೆ ಜತೆಗೆ ಕೆಮ್ಮು, ಆಯಾಸದ ಲಕ್ಷಣ ಹೆಚ್ಚಾಗಿ ಗೋಚರಿಸಲು ಶುರುವಾದರೆ ತಕ್ಷಣವೇ ವೈದ್ಯರನ್ನ ಭೇಟಿ ಮಾಡಿ ರಕ್ತ ತಪಾಸಣೆ ಮಾಡಿಸಿಕೊಳ್ಳಿ (ಬ್ಲಡ್ ಕೌಂಟ್, ಕಿಡ್ನಿ ಫಂಕ್ಷನ್ ಟೆಸ್ಟ್, ಲಿವರ್ ಫಂಕ್ಷನ್ ಟೆಸ್ಟ್) ಮತ್ತು ಸಿಟಿ ಸ್ಕ್ಯಾನ್ ಕೂಡ ಮಾಡಿಸಿ. ರೋಗಲಕ್ಷಣ ಐದು ದಿನಗಳ ನಂತರ ಕೂಡ ಮುಂದುವರೆದರೆ ವಯಸ್ಸಾದವರು ಹಾಗೂ ಮದುಮೇಹಿಗಳು ಆಸ್ಪತ್ರೆಗೆ ದಾಖಲಾಗುವುದು ಉತ್ತಮ.
6ನೇ ದಿನ
ಎದೆಯ ಸಿಟಿ ಸ್ಕ್ಯಾನ್ನಲ್ಲಿ ಶ್ವಾಸಕೋಶದಲ್ಲಿ ವ್ಯತ್ಯಾಸ ಕಂಡು ಬಂದರೆ, ವೈದ್ಯರ ಸೂಚನೆಯಂತೆ ಮನೆಯಲ್ಲಿ ಪ್ರತ್ಯೇಕವಾಗಿ ಅಥವಾ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕು ಎಂಬುದನ್ನ ನಿರ್ಧರಿಸಿ.
7ನೇ ದಿನ
ಒಂದು ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ವೈದ್ಯರು ನಿಮ್ಮ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ಮನೆಯಲ್ಲಿ ಐಸೋಲೇಷನ್ ಆದರೆ ವೈದ್ಯರಿಗೆ ರೋಗ-ಲಕ್ಷಣಗಳ ಬಗ್ಗೆ ಮೇಲಿಂದ ಮೇಲೆ ಮಾಹಿತಿ ನೀಡಿ.
8 ರಿಂದ10ನೇ ದಿನ
ಒಂದು ವೇಳೆ ಜ್ವರ, ವಾಂತಿ ಹಾಗೂ ಕೆಮ್ಮು ಮುಂದುವರಿದರೆ ಅಥವಾ ತೀವ್ರವಾದರೆ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿ. ಈ ಸಮಯದಲ್ಲಿ ಆ್ಯಂಟಿ ವೈರಲ್ ಡ್ರಗ್ಸ್ಗಳಾದ ರೆಮ್ಡಿಸಿವಿರ್ ಸೇರಿದಂತೆ ಇತರೆ ಪ್ರಮುಖ ಔಷಧಿ ನೀಡುತ್ತಾರೆ. ಜತೆಗೆ ಬೇರೆ ಕಾಯಿಲೆ ಗುರುತಿಸಲು ಹಲವು ಪರೀಕ್ಷೆ ನಡೆಸುತ್ತಾರೆ. ಒಂದು ವೇಳೆ ದೇಹದಲ್ಲಿ ಆಮ್ಲಜನಕದ ಮಟ್ಟ 94ಕ್ಕಿಂತಲೂ ಕಡಿಮೆ ಇದ್ದರೆ ಆಮ್ಲಜನಕ(ಆಕ್ಸಿಜನ್) ಒದಗಿಸಲಿದ್ದಾರೆ.
11ರಿಂದ14ನೇ ದಿನ
ನಿಮ್ಮ ಅಗತ್ಯಕ್ಕೆ ತಕ್ಕಂತೆ ಆ್ಯಂಟಿವೈರಲ್ ಸೇರಿ ಇತರೆ ಔಷಧಿ ನೀಡುತ್ತಾರೆ. ಆಕ್ಸಿಜನ್ ಪೂರೈಕೆ ಮುಂದುವರೆಯಲಿದೆ. ಈ ವೇಳೆ ನೀವೂ ಸಂಪೂರ್ಣವಾಗಿ ಗುಣಮುಖರಾಗಿ ಆಕ್ಸಿಜನ್ ಮಟ್ಟ ಮೂರು ದಿನದಲ್ಲಿ 95ಕ್ಕೆ ಏರಿಕೆಯಾಗಲಿದ್ದು, ಈ ಅವಧಿಯಲ್ಲೇ ರೋಗಿಗಳು ಡಿಸ್ಚಾರ್ಜ್ ಆಗಲಿದ್ದಾರೆ.
ಸ್ಟಿರಾಯ್ಡ್ ಬಗ್ಗೆ ಎಚ್ಚರಿಕೆ
ಕೋವಿಡ್ ಗುಣಲಕ್ಷಣ ಕಾಣಿಸಿಕೊಂಡ ತಕ್ಷಣವೇ ಕೆಲವರು ಸ್ಟಿರಾಯ್ಡ್ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಈ ಕೆಲಸ ಮಾಡಬೇಡಿ. ಆಮ್ಲಜನಕ ಮಟ್ಟ ಕಡಿಮೆಯಾದಾಗ ಮಾತ್ರ ತೆಗೆದುಕೊಳ್ಳಿ. ಜತೆಗೆ ವೈದ್ಯರ ಸಲಹೆ ಪಡೆದುಕೊಳ್ಳಿ.
ಆ್ಯಂಟಿವೈರಲ್ ಡ್ರಗ್ಸ್ ಯಾವಾಗ ಬಳಸಬೇಕು?
ಆ್ಯಂಟಿವೈರಲ್ ಔಷಧಿಗಳು ಕೊರೊನಾ ವೈರಸ್ ಪುನರಾವರ್ತನೆ ಆಗದಂತೆ ತಡೆಹಿಡಿಯುತ್ತವೆ. ರೋಗಿಯ ಸ್ಥಿತಿಗತಿ ನೋಡಿ ವೈದ್ಯರು ರೆಮ್ಡಿಸಿವಿರ್ ಸೇರಿ ಪ್ರಮುಖ ಮಾತ್ರೆಗಳನ್ನು ಬಳಸಲು ಸೂಚಿಸುತ್ತಾರೆ.
ಹೋಂ ಐಸೋಲೇಷನ್ ಮುನ್ನೆಚ್ಚರಿಕೆಗಳು
- ಕೊರೊನಾ ಸೋಂಕಿತನ ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆಯಾಗಿದ್ದರೆ ಅಥವಾ ಉಸಿರಾಟದ ಪ್ರಮಾಣ ನಿಮಿಷಕ್ಕೆ 24ಕ್ಕಿಂತಲೂ ಹೆಚ್ಚಿದ್ದರೆ ಅದು ಎಚ್ಚರಿಕೆಯ ಗಂಟೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಿ.
- ಮನೆಯಲ್ಲಿ ಬಟ್ಟೆ ಮಾಸ್ಕ್ ವೈರಸ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ. ಈ ವೇಳೆ ಎನ್-95 ಮಾಸ್ಕ್ ಬಳಸಿ. ಸಾಧ್ಯವಾಗದಿದ್ದರೆ ಬಟ್ಟೆ ಮಾಸ್ಕ್ ಮೇಲೆ ಸರ್ಜಿಕಲ್ ಮಾಸ್ಕ್ ಬಳಸಿ
- ಮನೆಯಲ್ಲಿ ಸ್ನಾನ ಮಾಡಲು ಪ್ರತ್ಯೇಕ ಸ್ನಾನಗೃಹ ಸೌಲಭ್ಯ ಇಲ್ಲದಿದ್ದರೆ ಮನೆಯವರು ಬಳಸುವ ಸ್ನಾನಗೃಹವನ್ನೇ ಬಳಸಬಹುದು. ಆದರೆ ಪ್ರತಿ ಬಳಕೆ ನಂತರ ಬ್ಲೀಚಿಂಗ್ ಪೌಡರ್ ಅಥವಾ ಟಾಯ್ಲೆಟ್ ಕ್ಲೀನರ್ನಿಂದ ಸ್ವಚ್ಛಗೊಳಿಸಿ.
ಕೋವಿಡ್ ಸೋಂಕಿತರಿಗೆ ಅಹಾರದ ಸಲಹೆ
- ಕೋವಿಡ್ ರೋಗಿಗಳಿಗೆ ಯಾವುದೇ ಆಹಾರದ ನಿಯಮಗಳಿಲ್ಲ
- ಬಿಸಿಯಾಗಿರುವ ಆಹಾರ ಸೇವಿಸಿ, ಅತಿ ಹೆಚ್ಚು ನೀರು ಸೇವನೆ ಒಳ್ಳೆಯದು
- ಹಣ್ಣು, ಪ್ರೋಟಿನ್ ಹಾಗೂ ನಾರಿನಾಂಶವುಳ್ಳ ಆಹಾರ ಸೇವನೆ
- ಕರಿದ ಅಥವಾ ಜಂಕ್ ಫುಡ್ ಸೇವನೆಯನ್ನು ನಿಲ್ಲಿಸಿ
ಹೋಂ ಐಸೋಲೇಷನ್ ವೇಳೆ ಐದು ದಿನದೊಳಗೆ ಸೋಂಕು ಕಡಿಮೆಯಾದರೆ?
ಹೋಂ ಐಸೋಲೇಷನ್ ವೇಳೆ ಐದು ದಿನದೊಳಗೆ ಅಥವಾ ನಂತ್ರ ಕೋವಿಡ್ ಲಕ್ಷಣಗಳು ಕಡಿಮೆಯಾದರೆ ವೈದ್ಯರ ಸಲಹೆಯಂತೆ ಔಷಧಿ ಮುಂದುವರಿಸಿ. 65 ವರ್ಷ ಮೇಲ್ಪಟ್ಟವರು ಬೊಜ್ಜು, ಮಧುಮೇಹ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ 7ನೇ ದಿನದ ನಂತರ ಜ್ವರ, ವಾಂತಿ, ಉಸಿರಾಟ ಅಥವಾ ಆಯಾಸ ಮರಳಿ ಬಂದರೆ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಿ.
ಐದು ದಿನದಲ್ಲಿ ರೋಗ ಲಕ್ಷಣ ಕಡಿಮೆಯಾಗಿದ್ದರೆ, ಹೋಂ ಐಸೋಲೇಷನ್ನಲ್ಲಿರುವವರು ಅಗತ್ಯ ಮುನ್ನೆಚ್ಚರಿಕೆಯಾಗಿ 10 ದಿನ ಪ್ರತ್ಯೇಕವಾಗಿ ಉಳಿದುಕೊಳ್ಳಬಹುದು. ಆದರೆ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿರಬೇಕು. ಸಂಪೂರ್ಣವಾಗಿ ಚೇತರಿಕೆಯಾದ ಬಳಿಕ ಕೂಡ 14 ದಿನಗಳ ಕಾಲ ಮನೆಯಲ್ಲೇ ಇರುವುದು ಉತ್ತಮ.