ಜಲಂಧರ್: ಸಿಖ್ಖರ ಮೊದಲ ಗುರು ಗುರುನಾನಕ್ ದೇವ್ ಜಿ ಅವರು ಜಗತ್ತಿಗೆ ತಮ್ಮದೇ ಆದ ಸಂದೇಶವನ್ನು ನೀಡಿ ಎಲ್ಲರ ಮನದಲ್ಲೂ ನೆಲೆಸಿದ್ದಾರೆ. ಅವರನ್ನು ಸ್ಮರಿಸುವ ಭಾಗವಾಗಿ ಜಲಂಧರ್‌ನಲ್ಲಿ ಅಂಗಡಿಯೊಂದನ್ನು ತೆರೆಯಲಾಗಿದ್ದು, ಅಲ್ಲಿ ಅಗತ್ಯವಿರುವ ಜನರು ಸ್ವಲ್ಪವೇ ಹಣ ಕೊಟ್ಟು ಬೇಕಾದ ವಸ್ತುಗಳನ್ನು ಕೊಂಡು ಹೋಗಬಹುದಾಗಿದೆ. ಗುರುನಾನಕ್ ದೇವ್ ಜಿ ಅವರ ಸಿದ್ಧಾಂತದ ಆಧಾರದಲ್ಲಿ ಈ ಅಂಗಡಿ ಕಾರ್ಯನಿರ್ವಹಿಸುತ್ತಿದ್ದು, ಜಲಂಧರ್‌ನಲ್ಲಿ ಉತ್ತಮ ಕೆಲಸ ಮಾಡುತ್ತಿದೆ.
ಜನರು ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿಗೆ ತಂದು ಇಡುತ್ತಾರೆ. ಹಾಗೆ ಇದರ ಅಗತ್ಯ ಇರುವ ಜನರು ಇಲ್ಲಿಗೆ ಬಂದು ಬಟ್ಟೆ, ಪುಸ್ತಕ, ಗೃಹೋಪಯೋಗಿ ವಸ್ತುಗಳು ಹೀಗೆ ಎಲ್ಲ ಬಗೆಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಅಂಗಡಿಯನ್ನು ಸೇವಕರು ತುಂಬಾ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದಾರೆ.
ನಿರ್ಗತಿಕನೊಬ್ಬ ತನ್ನ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯಿಂದ ಕೊಳ್ಳಲು ಬಯಸಿದರೆ ಕನಿಷ್ಠ ನೂರು ರೂಪಾಯಿಯಾದರೂ ಬೇಕು. ಅದರಲ್ಲೂ ಬಟ್ಟೆ, ಔಷಧ, ಪಡಿತರ ಮುಂತಾದ ಅಗತ್ಯ ವಸ್ತುಗಳ ವಿಷಯಕ್ಕೆ ಬಂದರೇ ಕೇಳುವಂತೆಯೇ ಇಲ್ಲ. ಈ ಎಲ್ಲ ಕಾರಣದಿಂದ ಈ ಅಂಗಡಿ ತೆರೆದು ಸಾಮಾಜಿಕ ಸೇವೆ ಸಲ್ಲಿಸಲಾಗುತ್ತಿದೆ. ಒಬ್ಬ ಬಡ ವ್ಯಕ್ತಿಗೆ ಬೇಕಾದ ಎಲ್ಲ ವಸ್ತುಗಳು ಕೇವಲ ರೂಪಾಯಿಗಳ ಲೆಕ್ಕದಲ್ಲಿ ಇಲ್ಲಿ ಲಭ್ಯವಿವೆ. ಅಷ್ಟೇ ಅಲ್ಲ ಬೇರೆ ರೀತಿಯ ಸೌಲಭ್ಯಗಳನ್ನೂ ಸಹ ಇಲ್ಲಿ ನೀಡಲಾಗುತ್ತಿದೆ.
ಕಾನೂನು ಸಲಹೆಗೆ 13 ರೂ.: ಯಾವುದೇ ರೀತಿಯ ಕಾನೂನು ಸಲಹೆ ಬೇಕಾದರೆ ವಕೀಲರ ಬಳಿ ಹೋಗುವ ಮುನ್ನ ಅವರ ಜೇಬನ್ನು ತುಂಬಿಸಬೇಕು. ಆದರೆ, ಇಲ್ಲಿ ಮಾತ್ರ ಕೇವಲ 13 ರುಪಾಯಿ ನೀಡಿ ಈ ಸೌಲಭ್ಯ ಪಡೆಯಬಹುದಾಗಿದೆ.
ಬಡವರಿಗೆ 13 ರೂ ನಲ್ಲಿ ಪಡಿತರ: ಬಡವರಿಗೆ ಕೇವಲ 13 ರೂ ನಲ್ಲಿ ಪಡಿತರ ನೀಡಲಾಗುತ್ತದೆ ಮತ್ತು ನಿರ್ಗತಿಕ ಬಾಲಕಿಯರ ವಿವಾಹವನ್ನು ಮಾಡಲು ಇಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈ ತೇರಾ ತೇರಾ ಹಟ್ಟಿಯಿಂದ ಮದುವೆ ಬ್ಯೂರೋ ಕೂಡ ನಡೆಯುತ್ತದೆ.
ಉಚಿತ ಪುಸ್ತಕ: ತೇರಾ ತೇರಾ ಹಟ್ಟಿಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಲಾಗುತ್ತದೆ. ತರಗತಿಯ ಪುಸ್ತಕಗಳನ್ನು ಸಹ ಉಚಿತವಾಗಿ ಇಲ್ಲಿ ಪಡೆಯಬಹುದು. 1 ನೇ ತರಗತಿಯಿಂದ 12 ನೇ ತರಗತಿ ವರೆಗಿನ ಪುಸ್ತಕಗಳನ್ನು ಈ ಮಳಿಗೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ.
ವೈದ್ಯಕೀಯ ಸೇವೆ: ಇಲ್ಲಿ ಚಿಕ್ಕ ಕ್ಲಿನಿಕ್ ಕೂಡ ಸ್ಥಾಪಿಸಿದ್ದು, ವೈದ್ಯರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳಿಗೆ ಅಗತ್ಯ ಔಷಧಗಳನ್ನು ಒದಗಿಸಲಾಗುತ್ತದೆ. ಇದು ಸಹ ಕೆಲವೇ ರೂಗಳಲ್ಲಿ ಲಭ್ಯವಾಗಿದೆ.
ಇದನ್ನೂ ಓದಿ: ಅಬ್ಬಾ ಬದುಕಿದೆವು..! ಕಾರ್ನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್